ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಿದಾರೆ. ನಾಯಕತ್ವ ಬದಲಾವಣೆ ಕೂಗಿಗೆ ಬ್ರೇಕ್ ಹಾಕುವ ಜೊತೆಗೆ ಪುತ್ರ ಬಿ. ವೈ. ವಿಜಯೇಂದ್ರ ರಾಜಕೀಯ ಭವಿಷ್ಯವನ್ನು ಸುಭದ್ರಗೊಳಿಸುವಲ್ಲಿ ಸಫಲರಾಗಿದ್ದಾರೆ.
ಹೌದು, ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲಿಗೆ ಮಹತ್ವದ ಚುನಾವಣೆಯಾಗಿತ್ತು. ಪದೇ ಪದೇ ನಾಯಕತ್ವ ಬದಲಾವಣೆಯ ಸುದ್ದಿ ಹರಿಬಿಡುವ ಸ್ವಪಕ್ಷೀಯರಿಗೆ ತಕ್ಕ ಉತ್ತರ ಕೊಡುವ ಹಾಗೂ ಆಪರೇಷನ್ ಕಮಲದ ಮೂಲಕ ಅಧಿಕಾರ ನಡೆಸುತ್ತಿದ್ದಾರೆ, ಬಿಜೆಪಿ ಸರ್ಕಾರಕ್ಕೆ ಜನರ ಬೆಂಬಲ ಇಲ್ಲ ಎನ್ನುವ ಪ್ರತಿ ಪಕ್ಷಗಳ ಟೀಕೆಗೆ ಎರಡೂ ಕ್ಷೇತ್ರ ಗೆದ್ದು ಪ್ರತ್ಯುತ್ತರ ನೀಡುವ ಸವಾಲು ಎದುರಾಗಿತ್ತು. ಇದರಲ್ಲಿ ಬಿಎಸ್ವೈ ಸಫಲರಾಗಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ತಂದಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಸದನದಲ್ಲಿ ಉತ್ತರ ನೀಡುವಾಗಲೇ ಸಿಎಂ ಯಡಿಯೂರಪ್ಪ ಎರಡೂ ಕ್ಷೇತ್ರ ಗೆದ್ದು ನಮ್ಮ ಸರ್ಕಾರಕ್ಕೆ ಜನಾಶೀರ್ವಾದ ಇದೆ ಎಂದು ತೋರಿಸುವ ಸವಾಲು ಹಾಕಿದ್ದರು. ಅದರಂತೆ ಎರಡೂ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಸ್ವಪಕ್ಷೀಯ ಕೆಲ ನಾಯಕರು ಮತ್ತು ಪ್ರತಿಪಕ್ಷಕ್ಕೆ ಏಕಕಾಲಕ್ಕೆ ಉತ್ತರ ನೀಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಸರ್ಕಾರ ರಚನೆಗೆ ಕಾರಣರಾದವರಲ್ಲಿ ಒಬ್ಬರಾದ ಮುನಿರತ್ನರಿಗೆ ಕೊಟ್ಟ ಮಾತಿನಂತೆ ಟಿಕೆಟ್ ಕೊಡಿಸಿದ್ದ ಸಿಎಂ, ಕೊನೆ ದಿನ ಪ್ರಚಾರ ನಡೆಸಿ ಮುನಿರತ್ನ ಮಂತ್ರಿಯಾಗಲಿದ್ದಾರೆ ಆಶೀರ್ವಾದ ಮಾಡಿ ಎಂದು ಮತದಾರರಿಗೆ ಮನವಿ ಮಾಡಿದ್ದರು. ಬಿಜೆಪಿ ಸಾಂಪ್ರದಾಯಿಕ ಮತ, ಮುನಿರತ್ನ ವೈಯಕ್ತಿಕ ವರ್ಚಸ್ಸಿನ ಮತ ಹಾಗು ಸಚಿವ ಸ್ಥಾನ ನೀಡುವ ಯಡಿಯೂರಪ್ಪ ಘೋಷಣೆಯ ತಂತ್ರ ಇಲ್ಲಿ ವರ್ಕೌಟ್ ಆಗಿದ್ದು, ಅಭ್ಯರ್ಥಿ ಗೆಲ್ಲಿಸಿಕೊಳ್ಳುವಲ್ಲಿ ಸಿಎಂ ಸಕ್ಸಸ್ ಆಗಿ ಟಿಕೆಟ್ ಕೊಡಿಸುವ ವೇಳೆ ಗೆಲ್ಲಿಸಿಕೊಂಡು ಬರವುದಾಗಿ ಹೈಕಮಾಂಡ್ ನೀಡಿದ್ದ ಮಾತನ್ನೂ ಉಳಿಸಿಕೊಂಡಿದ್ದಾರೆ.
ಶಿರಾದಲ್ಲಿ ಹೊಸ ಇತಿಹಾಸ ಬರೆದ ಕಮಲಪಡೆ
ಇನ್ನು ಶಿರಾ ಉಪ ಚುನಾವಣೆ ಬಿಜೆಪಿ ಪಾಲಿಗೆ ಹೊಸ ಇತಿಹಾಸ, ಒಮ್ಮೆಯೂ ಬಿಜೆಪಿ ಗೆಲ್ಲದ ಶಿರಾ ಕ್ಷೇತ್ರದಲ್ಲಿ ಠೇವಣಿಯೂ ಪಡೆಯಲ್ಲ ಎನ್ನಲಾಗುತ್ತಿತ್ತು ಅಂತಹ ಕ್ಷೇತ್ರ ಇದೀಗ ಬಿಜೆಪಿ ವಶವಾಗಿದೆ. ಆ ಮೂಲಕ ಶಿರಾದಲ್ಲಿ ಹೊಸ ರಾಜಕೀಯ ಪರ್ವ ಆರಂಭಗೊಂಡಿದೆ.
ಎರಡೂ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಪಡೆದಿದ್ದು,ಯಡಿಯೂರಪ್ಪ ಸರ್ಕಾರದ ವರ್ಚಸ್ಸು, ಜನಮನ್ನಣೆಗೆ ಸಾಕ್ಷಿಯಾಗಿದೆ. ಕೊರೊನಾ ನಂತರ ನಡೆದ ಮೊದಲ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಜನ ಮತ ನೀಡಿದ್ದಾರೆ. ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಬಿಜೆಪಿ ಗೆಲುವು ಯಡಿಯೂರಪ್ಪಗೆ ಹೊಸ ಶಕ್ತಿ ತಂದಿದೆ.
ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಿದ್ದಂತೆ ಎಲ್ಲರ ಚಿತ್ತ ದೆಹಲಿಯತ್ತ ಹರಿಯುತ್ತಿತ್ತು. ಇಡೀ ದೇಶದಲ್ಲಿ 75 ವರ್ಷ ದಾಟಿದ ನಾಯಕರಿಗೆ ಸರ್ಕಾರದಲ್ಲಿ ಯಾವ ಹುದ್ದೆ ನೀಡಬಾರದು ಎನ್ನುವ ನಿಯಮ ಪಾಲಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಸಡಿಲಿಕೆ ನೀಡಲಾಗಿದೆ. 77 ವರ್ಷ ದಾಟಿದರೂ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ.
ಇದರ ಲಾಭಕ್ಕೂ ನಾಯಕತ್ವ ಬದಲಾವಣೆ ಕೂಗು ಏಳುವುದನ್ನೇ ಬಳಸಿಕೊಳ್ಳುವ ಲೆಕ್ಕಾಚಾರ ಹಾಕುವ ಚಿಂತನೆ ಹೈಕಮಾಂಡ್ನಲ್ಲಿಯೂ ಆಗಾಗ ಬರುತ್ತಿತ್ತು. ಆದರೆ ಈಗ ಯಡಿಯೂರಪ್ಪ ಉಪ ಚುನಾವಣೆ ಗೆಲ್ಲುವ ಮೂಲಕ ತಮ್ಮನ್ನು ಅಷ್ಟು ಸುಲಭವಾಗಿ ಮುಟ್ಟಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಹೈಕಮಾಂಡ್ ನಾಯಕರಿಗೂ ರವಾನಿಸಿದ್ದಾರೆ. ಪ್ರಚಂಡ ಗೆಲುವು ಸಧ್ಯದ ಮಟ್ಟಿಗೆ ನಾಯಕತ್ವ ಬದಲಾವಣೆ ಕೂಗಿಗೆ ಬ್ರೇಕ್ ಹಾಕಿದ್ದು, ಸಿಎಂ ಕುರ್ಚಿ ಭದ್ರವಾಗಿದೆ.
ಪುತ್ರನ ರಾಜಕೀಯ ಭವಿಷ್ಯ ಸುಭದ್ರ
ಇನ್ನು ಶಿರಾ ಕ್ಷೇತ್ರದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ತಂಡ ರಚಿಸಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಉಸ್ತುವಾರಿಯಲ್ಲೇ ಚುನಾವಣೆ ಎದುರಿಸಿದ್ದು ಗುಟ್ಟಾಗೇನು ಉಳಿದಿಲ್ಲ. ಶಿರಾದಲ್ಲೇ ಬೀಡು ಬಿಟ್ಟು ಜವಾಬ್ದಾರಿ ವಹಿಸಿಕೊಂಡು ಅವಿರತವಾಗಿ ಪ್ರಚಾರ ಕಾರ್ಯ ನಡೆಸಿದ್ದರು. ಕೆ.ಆರ್ ಪೇಟೆ ನಂತರ ಶಿರಾದ ಉಸ್ತುವಾರಿ ವಹಿಸಿಕೊಂಡು ಕ್ಷೇತ್ರ ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ರಾಜಕೀಯ ಚಾಣಾಕ್ಷತನವನ್ನು ಪಕ್ಷದ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧವೂ ಆಗಾಗ ಅಸಮಧಾನದ ಕೂಗು ಕೇಳಿಬರುತ್ತಿತ್ತು. ಕೆಲ ನಾಯಕರು ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದರು. ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ವಿಜಯೇಂದ್ರ ರಾಜಕೀಯ ಅನುಭವದ ಪ್ರಶ್ನೆಯನ್ನೂ ಮಾಡುತ್ತಿದ್ದರು. ಈಗ ಅದಕ್ಕೆಲ್ಲಾ ಶಿರಾದಲ್ಲಿ ಕಮಲ ಅರಳಿಸುವ ಮೂಲಕ ವಿಜಯೇಂದ್ರ ಉತ್ತರ ನೀಡಿದ್ದಾರೆ. ಉಪಾಧ್ಯಕ್ಷ ಸ್ಥಾನ ನೀಡಿದ್ದನ್ನು ಫಲಿತಾಂಶದ ಮೂಲಕ ಸಮರ್ಥಿಸಿಕೊಂಡಿದ್ದು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನೂ ವಿಜಯೇಂದ್ರ ಭದ್ರಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೈಕಮಾಂಡ್ ಮಧ್ಯಪ್ರವೇಶ ಅನುಮಾನ
ಇನ್ನು ಕೆಲ ನಾಯಕರು ಯಡಿಯೂರಪ್ಪ ವಿರುದ್ಧ ಆಡುತ್ತಿರುವ ಅಸಮಧಾನದ ಮಾತಿಗೆ ಹೈಕಮಾಂಡ್ ಮನ್ನಣೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಯಡಿಯೂರಪ್ಪ ನಾಯಕತ್ವ ಪ್ರಶ್ನಿಸಲು ಸಕಾಲವಲ್ಲ ಎನ್ನವುದು ವರಿಷ್ಠರಿಗೂ ಮನವರಿಕೆಯಾಗಿದ್ದು, ನಾಯಕತ್ವ ಬದಲಾವಣೆ ಕೂಗಿನ ನಡುವೆ ಮಧ್ಯ ಪ್ರವೇಶ ಮಾಡಿ ಅತೃಪ್ತರ ಅಹವಾಲು ಆಲಿಸುವ ಪ್ರಯತ್ನಕ್ಕೆ ಹೋಗುವುದಿಲ್ಲ. ಸಧ್ಯಕ್ಕೆ ಯಡಿಯೂರಪ್ಪ ಸೇಫ್ ಆಗಿದ್ದಾರೆ ಎನ್ನಲಾಗುತ್ತಿದೆ.