ದೇವನಹಳ್ಳಿ(ಬೆಂಗಳೂರು): ಆರೋಗ್ಯ ಸಿಬ್ಬಂದಿ ಮತ್ತು ಫ್ರಂಟ್‌ಲೈನ್ ವಾರಿಯರ್ಸ್ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
ವಿದೇಶಗಳಲ್ಲಿ ಕಾಣಿಸಿಕೊಂಡಿರುವ 'Omicron' ವೈರಸ್ ಹಿನ್ನೆಲೆಯಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 3ನೇ ಅಲೆ ನಿಯಂತ್ರಣಕ್ಕಾಗಿ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಇಂದು ಏರ್ಪೋರ್ಟ್ಗೆ ಆರೋಗ್ಯ ಸಚಿವರು ಭೇಟಿ ನೀಡಿದರು.
ಏರ್ಪೋರ್ಟ್ನಲ್ಲಿ ಕಟ್ಟುನಿಟ್ಟಿನ ಕ್ರಮ:
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆಯಂತೆ ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನೂ ಕಡ್ಡಾಯವಾಗಿ ಆರ್-ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸರ್ಕಾರದ ಶೇ.5ರಷ್ಟು ಮಾರ್ಗಸೂಚಿ ಇದ್ದರೂ ಮುಖ್ಯಮಂತ್ರಿಗಳ ಸೂಚನೆಯಂತೆ ಮುನ್ನೆಚ್ಚರಿಕೆ ತೆಗೆದುಕೊಂಡು ಏರ್ಪೋರ್ಟ್ನಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆ್ಯಪ್ ಮೂಲಕ ಪ್ರಯಾಣಿಕರ ಮೇಲೆ ನಿಗಾ
ಏರ್ಪೋರ್ಟ್ನಲ್ಲೂ ಪ್ರಯಾಣಿಕರನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿ, ಅಲ್ಲಿಯೇ ವರದಿ ನೀಡಲಾಗುವುದು. ವರದಿಯಲ್ಲಿ ನೆಗೆಟಿವ್ ಬಂದರೆ ಮನೆಗೆ ಕಳಿಸಲಾಗುವುದು ಮತ್ತು ಮನೆಯಲ್ಲಿ 7 ದಿನಗಳ ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಆ್ಯಪ್ ಮೂಲಕ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು.
ಒಂದು ವೇಳೆ ಪ್ರಯಾಣಿಕರಿಗೆ ರೋಗದ ಲಕ್ಷಣ ಕಂಡು ಬಂದು, ವರದಿಯಲ್ಲಿ ನೆಗಟಿವ್ ಬಂದರೆ ಮನೆಗೆ ಕಳುಹಿಸಲಾಗುವುದು. 5 ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ನಂತರವೂ ನೆಗೆಟಿವ್ ಬಂದರೆ 7 ದಿನಗಳ ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗುವುದು. ವರದಿಯಲ್ಲಿ ಪಾಸಿಟಿವ್ ಬಂದರೆ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಡಿ.2 ಅಥವಾ 3 ರಂದು ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಮಾಡಲಿದ್ದು, ಆರೋಗ್ಯ ಸಿಬ್ಬಂದಿ ಮತ್ತು ಫ್ರಂಟ್ ಲೈನ್ ವಾರಿಯಾರ್ಸ್ಗಳಿಗೆ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ನೀಡಿರುವ 2ನೇ ಡೋಸ್ ಅವಧಿ ಬಹಳ ದಿನಗಳಾಗಿದ್ದು, ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಸಾಧ್ಯತೆ ಇದೆ. ಬೂಸ್ಟರ್ ಡೋಸ್ನ ಸಾಧಕ- ಬಾಧಕಗಳನ್ನು ನೋಡಿಕೊಂಡು 3ನೇ ಡೋಸ್ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರ ಮೂರನೇ ಅಲೆ ನಿಯಂತ್ರಣಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಇದರಲ್ಲಿ ಸರ್ಕಾರ ಯಾವುದೇ ಲೋಪ ಮತ್ತು ಆಲಸ್ಯ ಮಾಡುವುದಿಲ್ಲ. ಕಾಲ ಕಾಲಕ್ಕೆ ಸಭೆಗಳನ್ನು ಮಾಡುವ ಮೂಲಕ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Omicron ಆತಂಕದಿಂದ ಹೊರಬಂದ ಉದ್ಯಮಗಳು: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ