ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ನಂಟು ಸಂಬಂಧ ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮುಂಬೈನಲ್ಲಿರುವ ನಿವಾಸದಲ್ಲಿ ಆದಿತ್ಯ ಆಳ್ವಾ ಅವರಿಗಾಗಿ ಶೋಧ ನಡೆಸಿದರು.
ಇದಕ್ಕೂ ಮುನ್ನ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದೇ ಮುಂಬೈನಲ್ಲಿ ಇರುವ ಒಬೆರಾಯ್ ನಿವಾಸಕ್ಕೆ ಸಿಸಿಬಿ ಪೊಲೀಸರು ತಲುಪಿದ್ದಾರೆ. ಶೋಧ ಕಾರ್ಯಕ್ಕೂ ಮುನ್ನ ದಂಪತಿ (ವಿವೇಕ್ ಒಬೆರಾಯ್-ಪ್ರಿಯಾಂಕಾ ಆಳ್ವಾ) ಪೊಲೀಸರಿಗೆ ಅಡ್ಡಿಪಡಿಸಿ, ನಮ್ಮ ಮನೆಗೆ ಯಾಕೆ ಬಂದಿದ್ದಿರಾ? ಎಂದು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಡ್ರಗ್ಸ್ ಪ್ರಕರಣದ ಗಂಭೀರತೆ ಬಗ್ಗೆ ಮನವೊಲಿಸಿದ ನಂತರ ಪರಿಶೀಲನೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.
ಆದಿತ್ಯ ಆಳ್ವ ಬಗ್ಗೆ ನಾವೇನು ಹೇಳುವುದಿಲ್ಲ. ನಿಮ್ಮ ತನಿಖೆ ನೀವು ಮಾಡಿಕೊಳ್ಳಿ ಎಂದು ದಂಪತಿ ಹೇಳಿದ್ದಾರೆ ಎನ್ನಲಾಗಿದೆ. ವಿವೇಕ್ ದಂಪತಿ ಮೊಬೈಲ್ ಸಹ ನೀಡದೇ ತನಿಖೆಗೆ ಸಹಕರಿಸಿಲ್ಲ. ಸಂಪೂರ್ಣವಾಗಿ ಮನೆ ಶೋಧಕ್ಕೆ ಬಿಡಲಿಲ್ಲ ಎನ್ನಲಾಗಿದೆ. ಆರಂಭದಲ್ಲಿ ಪೊಲೀಸರ ತನಿಖೆಗೆ ಅಸಹಕಾರ ನೀಡಿದ ಅವರು, ಪ್ರಕರಣದ ಗಂಭೀರತೆ ತಿಳಿಸಿದ ಬಳಿಕವಷ್ಟೇ ಮನೆ ಪರಿಶೀಲಿಸಲು ಒಳಬಿಟ್ಟರು.
ಮಾದಕ ವಸ್ತು ಮಾರಾಟಗಾರರೊಂದಿಗೆ ನಿರಂತರ ಸಂಪರ್ಕ ಹಾಗೂ ಲಾಕ್ಡೌನ್ ವೇಳೆ ಆದಿತ್ಯ ಆಳ್ವ ದೊಡ್ಡ ಮಟ್ಟದಲ್ಲಿ ಸಮಾರಂಭಗಳನ್ನು ಆಯೋಜಿಸುತ್ತಿದ್ದರು ಎನ್ನಲಾಗಿದೆ. ನಟಿಮಣಿಯರ ಜೊತೆಗೆ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಸುಳಿವು ಪೊಲೀಸರಿಗೆ ದೊರೆತಿತ್ತು. ಇವರ ವಿರುದ್ಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಇವರ ಪತ್ತೆಗೆ ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.