ಬೆಂಗಳೂರು: ಅಕ್ರಮಗಳ ಗೂಡಾಗಿ ಸುದ್ದಿಯಲ್ಲಿರುವ ಜೈಲುಗಳಲ್ಲಿ ಪಾರದರ್ಶಕತೆ ತರಲು ರಾಜ್ಯ ಕಾರಾಗೃಹ ಹಾಗೂ ಸುಧಾರಣಾ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರ ಮಾದರಿಯಲ್ಲಿ ಜೈಲು ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮೆರಾ ಒದಗಿಸಲಾಗಿದೆ.
ಪ್ರಾಥಮಿಕ ಹಂತದಲ್ಲಿ 90 ಬಾಡಿವೋರ್ನ್ ಕ್ಯಾಮೆರಾ: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ-20, ಮೈಸೂರು, ಶಿವಮೊಗ್ಗ, ವಿಜಯಪುರ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಧಾರವಾಡ ಸೆಂಟ್ರಲ್ ಜೈಲುಗಳಿಗೆ ತಲಾ 10 ಕ್ಯಾಮರಾ, ಮಂಗಳೂರು ಜಿಲ್ಲಾ ಜೈಲಿಗೆ-5 ಕ್ಯಾಮರಾ ಸೇರಿ ಪ್ರಾಥಮಿಕ ಹಂತದಲ್ಲಿ ಒಟ್ಟು 90 ಬಾಡಿವೋರ್ನ್ ಕ್ಯಾಮೆರಾಗಳನ್ನು ವಿತರಿಸಲಾಗಿದೆ. ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಮೆರಾ ಖರೀದಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾರದರ್ಶಕತೆ ತರಲು ಸಹಕಾರಿ: ಪರಿವರ್ತನೆ ಕೇಂದ್ರವಾಗಬೇಕಿದ್ದ ಜೈಲುಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಅಕ್ರಮದ ತಾಣವಾಗಿ ಮಾರ್ಪಡಾಗಿವೆ. ಜೈಲಿಗೆ ಹೋಗುವ ಆರೋಪಿಗಳು ಜಾಮೀನಿನ ಮೇರೆಗೆ ಹೊರ ಬಂದಾಗ ಇನ್ನಷ್ಟು ಅಪರಾದ ಎಸಗಲು ಸ್ಪೂರ್ತಿ ಕೇಂದ್ರಗಳಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಜೈಲಿನಲ್ಲಿ ಡ್ರಗ್ಸ್ ಸೇವನೆ, ಮೊಬೈಲ್ ಬಳಕೆ ಇನ್ನಿತರ ಅನೈತಿಕ ಚಟುವಟಿಕೆಗಳು ಮಾಮೂಲಿಯಾಗಿವೆ. ಪ್ರತಿ ಬಾರಿ ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿದಾಗಲೂ ಅವ್ಯವಹಾರ ನಡೆಸುತ್ತಿರುವುದು ಬಗ್ಗೆ ಬಹಿರಂಗಗೊಂಡಿವೆ.
ಸೆರೆಮನೆಯಲ್ಲಿ ಅಕ್ರಮ ವಾಸನೆ ಬಡಿದರೂ ಏನೂ ಗೊತ್ತಿಲ್ಲದವರಂತೆ ಜೈಲು ಸಿಬ್ಬಂದಿ ವರ್ತನೆ ಹಲವು ಅನುಮಾನಗಳಿಗೆ ಪುಷ್ಠಿ ಕೊಡುವಂತಿದೆ. ಇತ್ತೀಚೆಗಷ್ಟೇ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್ ಮಾಡಿ ಸಿಕ್ಕಿಬಿದ್ದಿದ್ದು, ಅವ್ಯವಹಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಿ ಜೈಲಿನಲ್ಲಿ ಅಕ್ರಮ ತಡೆಯಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಬಾಡಿವೋರ್ನ್ ಕ್ಯಾಮೆರಾ ಸಹಕಾರಿಯಾಗಲಿದೆ.
ಪ್ರತ್ಯೇಕ ಮಾನಿಟರಿಂಗ್ ಸಿಸ್ಟಂ: ಸದ್ಯ 90 ಬಾಡಿವೋರ್ನ್ ಕ್ಯಾಮೆರಾಗಳನ್ನ ನೀಡಲಾಗಿದ್ದು, ಕೈದಿಗಳ ಬಗ್ಗೆ ನಿಗಾ ವಹಿಸುವ ಜೈಲು ವಾರ್ಡನ್ ಸೇರಿ ಇನ್ನಿತರ ಸಿಬ್ಬಂದಿಗೆ ಕ್ಯಾಮರಾ ಧರಿಸಿ ಗಸ್ತು ತಿರುಗುವಂತೆ ತಾಕೀತು ಮಾಡಲಾಗಿದೆ. ಕರ್ತವ್ಯದಲ್ಲಿರುವ ಸಿಬ್ಬಂದಿ ಕ್ಯಾಮರಾ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಕ್ಯಾಮರಾ ಆಫ್ ಮಾಡುವುದನ್ನು ಕಂಡು ಬಂದರೆ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಎಲ್ಲಾ ಜೈಲು ಮುಖ್ಯ ಅಧೀಕ್ಷಕರಿಗೆ ತಾಕೀತು ಮಾಡಿದ್ದಾರೆ. ಕ್ಯಾಮರಾಗಳ ನಿರ್ವಹಣೆಗಾಗಿ ಆಯಾ ಜೈಲುಗಳಲ್ಲಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿ ಮಾನಿಟರಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಬಳಕೆ ಪ್ರಮಾಣ ಹೆಚ್ಚಳ: ವಿವಿಧ ಅಪರಾಧವೆಸಗಿ ಜೈಲು ಸೇರುವ ಆರೋಪಿಗಳು ಕಾರಾಗೃಹದಲ್ಲಿ ಸರಿಯಾದ ಊಟ, ಮೂಲಸೌಕರ್ಯ ಒದಗಿಸದೆ ಹೀನಾಯವಾಗಿ ನಡೆಸಿಕೊಂಡು ಮೃಗಗಳಂತೆ ಕಾಣುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಕೋರ್ಟ್ನಲ್ಲಿ ವಿಚಾರಣಾಧೀನ ಕೈದಿಗಳು ದಾವೆ ಹೂಡುವ ಮುಖಾಂತರ ವ್ಯವಸ್ಥೆಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಸುಖಾಸುಮ್ಮನೆ ಹಲ್ಲೆಗೈದಿದ್ದಾರೆ ಎಂದು ಆರೋಪಿಸಿ ಬಂಧಿಗಳು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಮೊರೆ ಹೋಗುತ್ತಿದ್ದಾರೆ. ಇದರಿಂದ ಮಾಡದ ತಪ್ಪಿಗೆ ಅಧಿಕಾರಿಗಳು ಕೋರ್ಟ್- ಕೇಸ್ ಎಂದು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜೈಲಿನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ, ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದಾಗ ಸೆರೆಯಾದ ದೃಶ್ಯವನ್ನ ಕೋರ್ಟ್ ಮುಂದೆ ತೋರಿಸಿ ಅಧಿಕಾರಿಗಳು ಸಮರ್ಥಿಸಿಕೊಳ್ಳಬಹುದಾಗಿದೆ. ಜೊತೆಗೆ ಒಂದೆ ಕಡೆ ಕುಳಿತು ಸಿಬ್ಬಂದಿ ಕಾರ್ಯಶೈಲಿ ಬಗ್ಗೆ ಗಮನಿಸಲು ಈ ಕ್ಯಾಮೆರಾ ಉಪಯೋಗಕ್ಕೆ ಬರಲಿದೆ.
ಮತ್ತೊಂದೆಡೆ, ಜೈಲು ಸಿಬ್ಬಂದಿ ಸಹ ಹಣದಾಸೆಗಾಗಿ ಕೈದಿಗಳ ಜೊತೆ ಅಕ್ರಮದಲ್ಲಿ ಭಾಗಿಯಾಗಿರುವ ನಿರ್ದಶನಗಳಿವೆ. ಜೈಲಿನಲ್ಲಿದ್ದುಕೊಂಡೆ ಕೈದಿಗಳು ಪರೋಕ್ಷವಾಗಿ ಅಪರಾಧ ಕೃತ್ಯಗಳ ಭಾಗಿಯಾಗದಂತೆ ಹಾಗೂ ಸಿಬ್ಬಂದಿಯ ಅಧಿಕಾರದ ದುರ್ಬಳಕೆ ತಡೆಯಲು ಬಾಡಿವೋರ್ನ್ ಕ್ಯಾಮೆರಾಗಳು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುಮತಿ ಪಡೆದು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗೆ ಕ್ಯಾಮೆರಾ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ವರ್ಷದಲ್ಲಿ 5ಜಿ ಜಾಮರ್ ಅಳವಡಿಕೆ: ಜೈಲು ಸಿಬ್ಬಂದಿ ತಪಾಸಣೆ ಬಿಗಿಗೊಳಿಸಿದರೂ ಬಂಧಿಗಳಲು ನಾನಾ ರೀತಿಯಲ್ಲಿ ಮೊಬೈಲ್ನ್ನು ಜೈಲಿನೊಳಗೆ ತರಿಸಿಕೊಂಡು ಪರೋಕ್ಷವಾಗಿ ಹೊರಗಿನ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಈಗಾಗಲೇ ಜಾಮರ್ ಅಳವಡಿಸಿದರೂ ಪ್ರಯೋಜನವಾದಂತಿಲ್ಲ. ಈ ಹಿಂದೆ ಅಳವಡಿಸಿದ ಜಾಮರ್ಗಳು 2ಜಿ ಜಾಮರ್ಗಳಾಗಿವೆ. ಪ್ರಸ್ತುತ 4ಜಿ ನೆಟ್ವರ್ಕ್ ಸಹಕರಿಸುವ ಮೊಬೈಲ್ ಗಳು ಬಂದಿರುವುದರಿಂದ ಜೈಲಿನಲ್ಲಿ ನೆಟ್ ವರ್ಕ್ ಸಿಗುವಂತಾಗಿದೆ. ಹೀಗಾಗಿ 2 ಜಿ ಬದಲಿಗೆ 5ಜಿ ಮಾದರಿ ಜಾಮರ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದ ಎಲ್ಲಾ ಜೈಲುಗಳಲ್ಲಿ 201 ಜಾಮರ್ಗಳನ್ನು ಹಾಕಲು ಸರ್ಕಾರ ಒಪ್ಪಿಗೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 5ಜಿ ಜಾಮರ್ಗಳನ್ನು ಅಳವಡಿಸಲು ಅನುಮತಿ ದೊರೆತಿದ್ದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ಕಾರ್ಯ ಪೂರ್ಣಗೊಳಿಸಿದೆ. ಜೈಲಿನ ಸುತ್ತಮುತ್ತ ನಿವಾಸಿಗಳಿಗೆ ತೊಂದರೆಯಾಗದಂತೆ ಅಧ್ಯಯನ ನಡೆಸಿದ್ದಾರೆ. ಇನ್ನೊಂದು ವರ್ಷದಲ್ಲಿ ಸೆಂಟ್ರಲ್ ಜೈಲಿನಲ್ಲಿ 5ಜಿ ಮಾದರಿಯ ಐದು ಜಾಮರ್ಗಳನ್ನು ಹಾಕಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರಿಗೆ ಬಾಡಿ ಕ್ಯಾಮೆರಾ ಅವಳಡಿಸಲು ಹೈಕೋರ್ಟ್ ಆದೇಶ