ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಈಗಾಗಲೇ ಹೈರಾಣಾಗಿದ್ದಾರೆ. ತೈಲ ಬೆಲೆ, ಗ್ಯಾಸ್, ಹೋಟೆಲ್ ತಿಂಡಿ-ತಿನಿಸು ದರವೆಲ್ಲವೂ ಏರುಗತಿಯಲ್ಲೇ ಸಾಗುತ್ತಿದೆ. ಈ ಮಧ್ಯೆ ಬೆಂಗಳೂರು ಮಂದಿಗೆ ನಗರದ ಜೀವನಾಡಿಯಾಗಿರುವ ಬಿಎಂಟಿಸಿ ಶಾಕ್ ಕೊಡುವುದಕ್ಕೆ ಸಜ್ಜಾಗಿದೆ.
ಬಿಎಂಟಿಸಿ ಬಸ್ಸುಗಳ ಟಿಕೆಟ್ ರೇಟು ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿರುವ ಬಿಎಂಟಿಸಿ ನಿಗಮ ಮೊದಲ ಬಾರಿ ಶೇ20ರಷ್ಟು ಟಿಕೆಟ್ ದರ ಏರಿಕೆಗೆ ಬೇಡಿಕೆ ಇಟ್ಟಿತ್ತು. ಕಳೆದ ವಾರ ಮತ್ತೆ ಹೊಸ ಪ್ರಸ್ತಾವನೆಯಲ್ಲಿ ಶೇ 35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಪ್ರತಿ ಸ್ಟೇಜ್ ದರವನ್ನೂ ಶೇ35 ರಷ್ಟು ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಟಿಕೆಟ್ ದರ ಎಷ್ಟಾಗುತ್ತೆ?: ಶೇ.35% ದರ ಏರಿಕೆಯಾದ್ರೆ ಸ್ಟೇಜ್ ವೈಸ್ ದರ ಎಷ್ಟಾಗುತ್ತೆ ಅಂತ ನೋಡುವುದಾದರೆ, ಆರಂಭಿಕ ದರ ಈಗ 5 ರೂಪಾಯಿ ಇದ್ದಲ್ಲಿ 35% ಹೆಚ್ಚಾದರೆ 6.75 ಪೈಸೆ ಆಗಲಿದೆ. ಈ ವೇಳೆ ಚಿಲ್ಲರೆ ಸಮಸ್ಯೆ ಎಂದುರಾಗಲಿದ್ದು, 7 ರೂ ನಿಗದಿ ಮಾಡುವ ಸಾಧ್ಯತೆ ಇದೆ. ಇದೇ ರೀತಿ 10 ರೂ ಇದ್ರೆ 13 ರೂ. 15 ಇದ್ದ ದರ 20ರೂ ಹೀಗೆ ಏರಿಕೆ ಆಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್, '2015ರಲ್ಲಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಅದಾದ ಬಳಿಕ ಯಾವುದೇ ರೀತಿಯ ದರ ಹೆಚ್ಚಳ ಮಾಡಿಲ್ಲ. ಈಗಾಗಲೇ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದೀವಿ, ಇದೀಗ ಕಳೆದೊಂದು ವಾರದ ಹಿಂದೆ ಹೊಸ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಟಿಕೆಟ್ ದರ ಏರಿಕೆ ಮಾಡುವುದು ಅನಿರ್ವಾಯವಾಗಿದ್ದು ಇದಕ್ಕೆ ಅನುಮತಿ ಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ' ಎಂದರು.
ಇದನ್ನೂ ಓದಿ: ಸುಡು ಬಿಸಿಲಿಂದ 'ಬೆಂದ'ಕಾಳೂರಿಗೆ ತಂಪೆರೆದ ವರುಣ