ಬೆಂಗಳೂರು: ಬಿಎಂಟಿಸಿಯಲ್ಲಿ ಉಂಟಾಗಿರುವ ಡೀಸೆಲ್ ಕೊರತೆಯನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು. ಸದ್ಯ ಐದಾರು ದಿನಗಳಿಗೆ ಆಗುವಷ್ಟು ದಾಸ್ತಾನಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಇಲಾಖೆಗೂ ಪತ್ರ ಬರೆಯಲಾಗಿದೆ. ಪ್ರಯಾಣಿಕರಿಗೆ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ತಿಳಿಸಿದರು.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, "ನಿತ್ಯ ಬಿಎಂಟಿಸಿಗೆ 3.45 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ. ಸಗಟು ವ್ಯಾಪಾರಿಗಳಿಂದ ತೈಲ ಖರೀದಿ ಮಾಡಲಾಗುತ್ತಿತ್ತು. ಸಗಟು ಮತ್ತು ಚಿಲ್ಲರೆ ಖರೀದಿಯ ನಡುವೆ ಪ್ರತಿ ಲೀಟರ್ ಗೆ 32 ರೂ. ವ್ಯತ್ಯಾಸವಿದೆ. ಇದನ್ನು ತಪ್ಪಿಸಲು ಸಗಟು ಮಾರುಕಟ್ಟೆಯಿಂದ ಡಿಪೋ ಬಂಕ್‌ಗಳಿಗೆ ಡೀಸೆಲ್ ಪೂರೈಕೆ ಮಾಡಿಸಿಕೊಳ್ಳುತ್ತಿದ್ದೇವೆ" ಎಂದು ಹೇಳಿದರು.
ಸಮಸ್ಯೆ ಸರಿಪಡಿಸುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ರಾಜ್ಯದಲ್ಲಿರುವ ಎಲ್ಲ ತೈಲ ಕಂಪನಿಗಳ ಸಮನ್ವಯಕಾರರಿಗೆ ಸಾರಿಗೆ ಸಂಸ್ಥೆಯು ಪತ್ರ ಬರೆದಿದೆ. ಸಮಸ್ಯೆ ಸರಿಪಡಿಸದಿದ್ದರೆ ಬಸ್‌ಗಳನ್ನು ರಸ್ತೆಗಿಳಿಸುವುದು ಕಷ್ಟ ಎಂದು ಚಾಲಕರು ಹೇಳುತ್ತಿದ್ದಾರೆ. ಖಾಸಗಿ ಪೆಟ್ರೋಲ್ ಬಂಕ್‌ಗಳಿಗೆ ಬಸ್‌ಗಳು ಹೋದರೆ ಸಂಚಾರ ದಟ್ಟಣೆ ಸಮಸ್ಯೆಯೂ ಹೆಚ್ಚಾಗುತ್ತದೆ. ಈ ಕುರಿತು ಸಾರಿಗೆ ಸಂಸ್ಥೆಯು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ ಎಂದರು.
2 ದಿನದಿಂದ ಡೀಸೆಲ್ ಕೊರತೆ: ಎರಡು ದಿನಗಳಿಂದ ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್ ಕೊರತೆ ಉಂಟಾಗಿದ್ದು, ಸಂಸ್ಥೆ ತೈಲ ಕಂಪನಿಗಳಿಗೆ ಸುಮಾರು 70 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದೇ ಪ್ರಮುಖ ಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ.
ಸಗಟು ಖರೀದಿ ದರಕ್ಕೆ ತತ್ತರಿಸಿದ ಬಿಎಂಟಿಸಿ: ಎಚ್‌ಪಿಸಿಎಲ್‌ನಿಂದ ಇಂಧನ ಖರೀದಿಸುತ್ತಿದ್ದ ಬಿಎಂಟಿಸಿ, ₹70 ಕೋಟಿ ಬಾಕಿ ಉಳಿಸಿಕೊಂಡಿದೆ. ಸದ್ಯ ಸಗಟು ಖರೀದಿ ದರ ಪ್ರತಿ ಲೀಟರ್ ಡೀಸೆಲ್‌ಗೆ ₹119 ಆಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ದರ ಲೀಟರ್‌ಗೆ ₹ 87 ಇದೆ. ಇದರಿಂದಾಗಿ ಬಿಎಂಟಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಡೀಸೆಲ್ ಖರೀದಿಸಿ ಬಸ್‌ಗಳ ಸಂಚಾರವನ್ನು ಸುಗಮ ಮಾಡಿಕೊಂಡಿತ್ತು.
ಚಿಲ್ಲರೆ ವ್ಯಾಪಾರಿಗಳೇ ಟ್ಯಾಂಕರ್‌ಗಳಲ್ಲಿ ಪ್ರತಿದಿನ ಸಂಸ್ಥೆಗಳ ಡಿಪೋಗಳಲ್ಲಿರುವ ಬಂಕ್‌ಗಳಿಗೆ ಪೂರೈಕೆ ಮಾಡುತ್ತಿದ್ದರು. ಸಂಸ್ಥೆಯು ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆಯುತ್ತಿತ್ತು. ಆದರೆ ಮೂರು ದಿನಗಳಿಂದಲೂ ಚಿಲ್ಲರೆ ವ್ಯಾಪಾರಿಗಳಿಂದ ಡೀಸೆಲ್ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತ ಬಹುತೇಕ ಡಿಪೋಗಳಲ್ಲಿ ಬಸ್‌ಗಳು ಸಂಚರಿಸದೆ ನಿಂತಲ್ಲೇ ನಿಂತಿವೆ ಎಂದು ತಿಳಿದು ಬಂದಿದೆ.
ಬಿಎಂಟಿಸಿ ಬೊಕ್ಕಸಕ್ಕೆ ಕತ್ತರಿ: ಮುಕ್ತ ಮಾರುಕಟ್ಟೆಯಲ್ಲಿ ಡೀಸೆಲ್ ಖರೀದಿಗೆ ಬಿಎಂಟಿಸಿ ಮುಂದಾಗಿತ್ತು. ಬಸ್ ಸಂಚಾರದಲ್ಲಿ ಉಂಟಾಗುವ ವ್ಯತ್ಯಯ ತಪ್ಪಿಸಲು ಸದ್ಯ ತೀವ್ರ ಕಸರತ್ತು ನಡೆಸಿದೆ. ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಪ್ರತಿನಿತ್ಯ ಸಂಚರಿಸುವ ಬಿಎಂಟಿಸಿ ಬಸ್‌ಗಳ ಸಂಖ್ಯೆಯಲ್ಲಿ ವ್ಯತ್ಯಯವಾಗಲಿದೆ. ಬಸ್ ಸಂಚಾರ ಏರುಪೇರಾದರೆ ಬಿಎಂಟಿಸಿ ಬೊಕ್ಕಸಕ್ಕೆ ದೊಡ್ಡ ಕತ್ತರಿ ಬೀಳಲಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಮೌನವಾದ ಸಿಎಂ ಬಸವರಾಜ ಬೊಮ್ಮಾಯಿ