ಬೆಂಗಳೂರು: ಬಿಬಿಎಂಪಿ ಶಿಕ್ಷಣ ಹಾಗೂ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾಗಿದ್ದ ರವೀಂದ್ರ ಅವರನ್ನು ವರ್ಗಾವಣೆ ಮಾಡಿ ಸೆಪ್ಟೆಂಬರ್ 18ರಂದು ಸರ್ಕಾರ ಆದೇಶಿಸಿದ್ದರೂ ಆ ವರ್ಗಾವಣೆ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ.
ವಿಶೇಷ ಆಯುಕ್ತರನ್ನು ವರ್ಗಾವಣೆ ಮಾಡಿ ತಿಂಗಳು ಸಮೀಪಿಸುತ್ತಿದೆ. ಆದರೆ, ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಅವರು ಮಾತ್ರ ಕುರ್ಚಿ ಬಿಡುತ್ತಿಲ್ಲ. ಈಗಲೂ ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿ ರವೀಂದ್ರ ಮುಂದುವರೆದಿದ್ದಾರೆ. ಕುರ್ಚಿ ಬಿಡುವಂತೆ ಸೂಚನೆ ನೀಡಬೇಕಿದ್ದ ಕಮಿಷನರ್ ಅನಿಲ್‌ಕುಮಾರ್ ಸಹ ಸುಮ್ಮನಿದ್ದಾರೆ. ಐಎಎಸ್ ಅಧಿಕಾರಿ ಜಿ ಸಿ ವೃಷಬೇಂದ್ರಮೂರ್ತಿ ಅಧಿಕಾರ ವಹಿಸಿಕೊಂಡಿಲ್ಲ. ಹೀಗಾಗಿ ರವೀಂದ್ರ ಮುಂದುವರೆದಿದ್ದಾರೆ ಎಂದು ಕಮಿಷನರ್ ಹೇಳಿಕೆ ನೀಡಿದ್ದಾರೆ.
ರೋಶಿನಿ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಇದರ ರೂವಾರಿ ರವೀಂದ್ರ ಎಂಬ ಆರೋಪ ಕೇಳಿ ಬಂದಿದೆ. ಇಷ್ಟಾದ್ರೂ ರವೀಂದ್ರ ಮಾತ್ರ ಕುರ್ಚಿ ಬಿಡ್ತಿಲ್ಲ. ಇದರ ಹಿಂದೆ ಸಾಕಷ್ಟು ಪ್ರಭಾವಿ ವ್ಯಕ್ತಿಗಳ ಒತ್ತಡ ಇದೆ ಎಂದೂ ಹೇಳಲಾಗುತ್ತಿದೆ.