ಬೆಂಗಳೂರು : ಹಿಜಾಬ್ ವಿವಾದದ ಕುರಿತು ಶಾಸಕ ಜಮೀರ್ ಅಹಮ್ಮದ್ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಜಾಬ್ ಹಾಕದಿದ್ದರೆ ಅತ್ಯಾಚಾರಗಳಾಗುತ್ತದೆ ಎಂಬ ಜಮೀರ್ ಅಹಮ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಕೆ.ಹರಿಪ್ರಸಾದ್, ಇದು ಅವರ ವೈಯಕ್ತಿಕ ಹೇಳಿಕೆ, ಪಕ್ಷದ ಹೇಳಿಕೆ ಅಲ್ಲ. ಅವರ ಸಮುದಾಯಕ್ಕೆ ಆದ ನೋವನ್ನು ಅವರು ವ್ಯಕ್ತ ಪಡಿಸಿರಬಹುದು ಎಂದು ಸಮಜಾಯಿಷಿ ನೀಡಿದರು.
ಹೆಣ್ಣುಮಕ್ಕಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ವಿರುದ್ಧ ನಾವು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ಮಾಡ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಈಶ್ವರಪ್ಪ ರಾಷ್ಟ್ರ ಧ್ವಜ ಬದಲಾವಣೆ ಮಾಡ್ತೇವೆ ಎಂದಿದ್ದಾರೆ. ಇದು ರಾಷ್ಟ್ರದ್ರೋಹದ ಹೇಳಿಕೆ. ಈಶ್ವರಪ್ಪ ಮೇಲೆ ರಾಷ್ಟ್ರದ್ರೋಹದ ಕೇಸ್ ಹಾಕಬೇಕು. ರೈತರು ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದಾಗ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಈಗ ಈಶ್ವರಪ್ಪ ವಿರುದ್ಧ ಕೇಸ್ ಹಾಕಿ ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಸ್ ಹೋದ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಅವರು, ಹಿಜಾಬ್ ವಿವಾದ ಕೋರ್ಟ್ನಲ್ಲಿದೆ ಎಂದು ತೆರಳಿದರು.