ಬೆಂಗಳೂರು: ದೇಶದೆಲ್ಲೆಡೆ ಪೆಟ್ರೋಲ್ ಡೀಸೆಲ್ ಬೆಲೆ ಮೇಲಿರುವ ಸುಂಕವನ್ನು ಕಡಿಮೆ ಮಾಡಲು ಆಗ್ರಹ ಮಾಡುವ ಯಾವುದೇ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ ಏಳು ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ, ಇದರ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮ ಯೋಜನೆ ಆಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವನ್ನ ಕೆಲವರು ಹೇಳುತ್ತಿದ್ದಾರೆಯೇ ಹೊರತು ರೈತರಿಗೆ ಹಾಗೂ ಬಡವರಿಗೆ ಸಿಗುತ್ತಿರುವ ಸೌಲಭ್ಯದ ಬಗ್ಗೆ ಯಾರೂ ಹೇಳುತ್ತಿಲ್ಲ. ಇಂಧನ ಬೆಲೆ ಏರಿಕೆ ಅನಿವಾರ್ಯದ ಪರಿಸ್ಥಿತಿಯಲ್ಲಿ ಆಗಿದೆ ಎಂದು ಸಮರ್ಥನೆ ನೀಡಿದರು.
ಶ್ಯಾಮ್ ಪ್ರಕಾಶ್ ಮುಖರ್ಜಿ ಬಲಿದಾನ ದಿನ:
ಶ್ಯಾಮ್ ಪ್ರಕಾಶ್ ಮುಖರ್ಜಿ ಬಲಿದಾನ ದಿನವಾದ ಜೂನ್ 23 ರಂದು ರಾಜ್ಯದಲ್ಲಿ 300 ಚಿಂತನ ಮಂಥನ ಕಾರ್ಯಕ್ರಮ ನಡೆಸಲಾಗುವುದು. ಒಟ್ಟು 58 ಸಾವಿರ ಬೂತ್ಗಳಲ್ಲಿ ಗಿಡ ನೆಡುವ ಕಾರ್ಯ ಹಾಗೂ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಮನೆ ಮನೆಗಳಲ್ಲಿ ಕೇಳಿಸುವ ಯೋಜನೆ ರೂಪಿಸಲಾಗಿದೆ ಎಂದು ರವಿಕುಮಾರ್ ಹೇಳಿದರು.
ರಾಜ್ಯದಲ್ಲಿ ಇರುವ 1.25 ಕೋಟಿ ಕುಟುಂಬದವರ ಬಳಿ ಹೋಗಿ, ಲಸಿಕೆ ಅಭಿಯಾನ ಮಾಡ್ತೇವೆ. ಲಸಿಕೆ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಪಡೆಯುತ್ತೇವೆ. ರಾಜ್ಯ ಕಾರ್ಯಕಾರಿಣಿ ಸಭೆ ಇದೇ 26 ನೇ ತಾರೀಖು ನಿಗಡಿಯಾಗಿದ್ದು, ಅರುಣ್ ಸಿಂಗ್ ವರ್ಚುವಲ್ ಮೂಲಕ ಭಾಗಿ ಆಗ್ತಾರೆ. 25 ರಂದು ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ಇದೆ. ಈ ಸಭೆ ಆಫ್ಲೈನ್ ಮೂಲಕ ನಡೆಯುತ್ತದೆ. ಆರು ವಿಷಯಗಳ ಮೇಲೆ ಇಡೀ ದೇಶದಾದ್ಯಂತ ಪ್ರಶಿಕ್ಷಣ ವರ್ಗ ನಡೆಯುತ್ತದೆ.
1. ಮೋದಿ ಸಾಧನೆ.
2. ರಾಷ್ಟ್ರೀಯ ಭದ್ರತೆ
3. ವಿದೇಶಾಂಗ ನೀತಿಯಲ್ಲಿ ಭಾರತದ ಸಾಧನೆ
4. ಆತ್ಮ ನಿರ್ಭರ ಭಾರತ
5. ಕೃಷಿ ಕಾಯ್ದೆ ಮತ್ತು ಸಾಧನೆ
6. ಶ್ಯಾಮಪ್ರಕಾಶ್ ಮುಖರ್ಜಿ ಮತ್ತು ಚಿಂತನೆ
7. ಬಡವರಿಗಾಗಿ ರೂಪಿಸಿದ ಯೋಜನೆ.
ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕ ಕ್ಯಾ.ಗಣೇಶ್ ಕಾರ್ಣಿಕ್ ತುರ್ತು ಪರಿಸ್ಥಿತಿ ಹಾಗೂ ಪತ್ರಿಕಾ ಸ್ವಾತಂತ್ರ್ಯ ಬಗ್ಗೆ ಮಾತನಾಡಿದರು. ಈ ವೇಳೆ, ವಿಧಾನಸಭೆಗೆ ಖಾಸಗಿ ಮಾಧ್ಯಮದವರು ಕ್ಯಾಮರಾ ಬಳಕೆಗೆ ತಡೆ ಹೇರಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ಕಾರ್ಣಿಕ್ ಮುಜುಗರದ ಸ್ಥಿತಿಯಲ್ಲಿ ಸರ್ಕಾರ ಯಾವುದೇ ಮಾಹಿತಿ ಕೊರತೆ ಮಾಡಿಲ್ಲ ಎಂದರು.