ಬೆಂಗಳೂರು: ಪ್ರಮುಖ ನಾಯಕರ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಚುನಾವಣೆ ಕುರಿತು ನಡೆದ ಬೆಂಗಳೂರು ಬಿಜೆಪಿ ಶಾಸಕರ ಸಭೆ ಅರ್ಧಕ್ಕೆ ಮೊಟಕುಗೊಂಡಿದ್ದು, ಸೋಮವಾರದ ನಂತರ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು.
ಇನ್ನೊಂದು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆಗೆ ವಾರ್ಡ್ಗಳ ಮೀಸಲಾತಿ ಪಟ್ಟಿ ಅಧಿಸೂಚನೆ ಪ್ರಕಟಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆ ಸಿದ್ಧತೆ ಕುರಿತು ಬಿಜೆಪಿ ನಾಯಕರು ಸಭೆ ನಡೆಸಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ಡಿಸಿಎಂ ಡಾ.ಅಶ್ವತ್ ನಾರಾಯಣ ನೇತೃತ್ವದಲ್ಲಿ ನಡೆದ ನಡೆದ ಸಭೆಯಲ್ಲಿ ಸಚಿವ ಎಸ್.ಸಿ ಸೋಮಶೇಖರ್, ಕೆ.ಗೋಪಾಲಯ್ಯ, ಶಾಸಕರಾದ ಉದಯ್ ಗರುಡಾಚಾರ್, ರವಿ ಸುಬ್ರಮಣ್ಯ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಬಿಬಿಎಂಪಿ ಚುನಾವಣಾ ಸಿದ್ದತೆ ಕುರಿತು ಸಮಾಲೋಚನೆ ನಡೆಸಲಾಯಿತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಾ ಅಥವಾ ಚುನಾವಣೆಗೆ ಸಿದ್ಧರಾಗಬೇಕಾ ಎನ್ನುವ ಜಿಜ್ಞಾಸೆ ಸಭೆಯಲ್ಲಿ ವ್ಯಕ್ತವಾಯಿತು. ಆದರೆ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಬಿಡಿಎ ಅಧ್ಯಕ್ಷ ಎಸ್. ಆರ್.ವಿಶ್ವನಾಥ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರೆಲ್ಲ ಬೆಳಗಾವಿಯಲ್ಲಿದ್ದು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದರಿಂದ ಇಂದು ಯಾವುದೇ ಚರ್ಚೆ ನಡೆಸದೇ ಸೋಮವಾರದ ನಂತರ ಮತ್ತೆ ಸಭೆ ಸೇರಿ ಚರ್ಚೆ ನಡೆಸುವ ಕುರಿತು ನಿರ್ಧಾರ ಕೈಗೊಂಡು ಇಂದಿನ ಸಭೆ ಮೊಟಕುಗೊಳಿಸಲಾಯಿತು.
ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ನಮ್ಮ ಸರ್ಕಾರದ ನಿಲುವು ಬಿಬಿಎಂಪಿ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎನ್ನುವುದಾಗಿತ್ತು. ಆದರೆ, ಅದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೊರೆ ಹೋಗಿದ್ದರು. ಈಗ ನ್ಯಾಯಾಲಯ ಮುಂದಿನ ದಿನದಲ್ಲಿ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಿ ಚುನಾವಣೆ ಮಾಡಿ ಎಂದು ತೀರ್ಪನ್ನು ಕೊಟ್ಟಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ನಾವು ಮುಖ್ಯಮಂತ್ರಿ ಬೆಂಗಳೂರಿಗೆ ಬಂದ ನಂತರ ಚರ್ಚೆ ಮಾಡಿ ಯಾವ ರೀತಿ ಮುಂದೆ ಸಾಗಬೇಕು ಸರ್ಕಾರದ ನಿಲುವು ಏನಾಗಬೇಕು ಎನ್ನುವುದನ್ನು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ಇಂದು ಶಾಸಕರು ಸಭೆ ಸೇರಿದ್ದೆವು ಬಿಬಿಎಂಪಿ ಚುನಾವಣೆ ಬಗ್ಗೆ ಸಭೆ ನಡೆಸಬೇಕು ಎಂದುಕೊಂಡಿದ್ದೆವು. ಆದರೆ, ಕಂದಾಯ ಸಚಿವ ಅಶೋಕ್, ವಸತಿ ಸಚಿವ ಸೋಮಣ್ಣ ಸೇರಿದಂತೆ ಪ್ರಮುಖ ನಾಯಕರು ಬೆಳಗಾವಿಯಲ್ಲಿ ಇದ್ದಾರೆ. ಹಾಗಾಗಿ ಅವರು ಬಂದ ನಂತರ ಸಭೆ ನಡೆಸೋಣ ಎಂದು ಇಂದಿನ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಹೈಕೋರ್ಟ್ ಆದೇಶ ನೋಡಿಲ್ಲ. ಅದನ್ನು ತರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತದೆ, ನಂತರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಬಿಬಿಎಂಪಿ ಚುನಾವಣೆ ಮಾಡಿ ಎಂದು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶಾಸಕರ ಸಭೆ ಮಾಡಿ ಸೇರಿ ಮಾತುಕತೆ ನಡೆಸಿದ್ದೇವೆ. ಚುನಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಚುನಾವಣೆಗೆ ಯಾವ ರೀತಿಯ ತಯಾರಿ ಆಗಬೇಕು ಅಂತ ಚರ್ಚೆಯಾಗಿದೆ. ಆರ್. ಅಶೋಕ್, ಸೋಮಣ್ಣ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದಲ್ಲ, ನಾವೆಲ್ಲರೂ ಚೆನ್ನಾಗಿದ್ದೇವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರೆಲ್ಲ ಬೆಳಗಾವಿಯಲ್ಲಿ ಇರುವ ಕಾರಣ ನಾವೇ ಸೇರಿದ್ದೇವೆ ಅಷ್ಟೇ ಎಂದರು.
ಸಭೆ ಔಚಿತ್ಯವೇ ಪ್ರಶ್ನಾರ್ಹ?
ಬೆಂಗಳೂರಿಗೆ ಸಂಬಂಧಪಟ್ಟ ಚುನಾವಣಾ ಜವಾಬ್ದಾರಿ ಇತ್ತೀಚಿನ ದಿನಗಳಲ್ಲಿ ಕಂದಾಯ ಸಚಿವ ಆರ್.ಅಶೋಕ್ ನಿರ್ವಹಿಸುತ್ತಿದ್ದರು. ಹೈಕಮಾಂಡ್ ಕೂಡ ಅಶೋಕ್ಗೆ ಜವಾಬ್ದಾರಿ ನೀಡುತ್ತಿತ್ತು. ಕಳೆದ ಬಾರಿಯ ಬಿಬಿಎಂಪಿ ಚುನಾವಣೆ ಕೂಡ ಅಶೋಕ್ ನೇತೃತ್ವದಲ್ಲಿ ನಡೆದಿತ್ತು. ಆದರೂ ಇಂದು ಅಶೋಕ್ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಸಭೆ ನಡೆಸುವ ಪ್ರಯತ್ನ ನಡೆಸಿ ಪರೋಕ್ಷವಾಗಿ ಅಶೋಕ್ಗೆ ಪರ್ಯಾಯ ನಾಯಕತ್ವದ ಸುಳಿವು ನೀಡಲು ರಾಜ್ಯ ಬಿಜೆಪಿಯ ಕೆಲ ನಾಯಕರ ತಂಡ ಮುಂದಾಯಿತಾ ಎನ್ನುವ ಮಾತುಗಳು ಇದೀಗ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.