ಬೆಂಗಳೂರು: ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಹೆಚ್.ಎಸ್. ದೊರೆಸ್ವಾಮಿ ಅವರ ನಿಧನಕ್ಕೆ ರಾಜ್ಯ ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದ ದೊರೆಸ್ವಾಮಿ ಅವರು, ಇಂದು ಇಲ್ಲವಾದರು ಎಂಬ ಸುದ್ದಿ ಕೇಳಿ ಬಹಳ ನೋವಾಗಿದೆ. ತಮ್ಮ ಮನೋಸ್ಥೈರ್ಯ, ಆತ್ಮಬಲದಿಂದಲೇ ಕೊರೊನಾ ಗೆದ್ದಿದ್ದರು. ನೂರು ದಾಟಿದರೂ ಬತ್ತದ ಉತ್ಸಾಹ, ಹೋರಾಟ, ನೇರ-ದಿಟ್ಟತನಗಳು ಅವರ ಶಕ್ತಿಯಾಗಿದ್ದವು ಮಾತ್ರವಲ್ಲದೆ, ಆ ಮೂಲಕ ನಮಗೆಲ್ಲರಿಗೂ ಪ್ರೇರಣೆಯಾಗಿದ್ದರು. ಅವರೊಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು, ದೇಶಪ್ರೇಮಿಯಾಗಿದ್ದರು, ಪತ್ರಕರ್ತರಾಗಿದ್ದರು, ಹೋರಾಟಗಾರರಾಗಿದ್ದರು. ಇದ್ದದ್ದನ್ನು ನೇರವಾಗಿ ಪ್ರಶ್ನಿಸುವ ಎದೆಗಾರಿಕೆ ಹೊಂದಿದ್ದರು. ಇಂಥವರ ಅಗಲಿಕೆ ಇಡೀ ನಾಡಿಗೆ ದೊಡ್ಡ ನಷ್ಟ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಲ್ಲ ಎನ್ನುವ ಮಾತಿನಂತೆ ಅವರು ಭೌತಿಕವಾಗಿ ನಮ್ಮನ್ನು ʼಬಿಟ್ಟುʼ ಹೋದರೂ, ನಮಗಾಗಿ ʼಇಟ್ಟುʼ ಹೋಗಿರುವ ಆದರ್ಶಗಳು, ಮೌಲ್ಯಗಳನ್ನು ಕಾಪಿಟ್ಟುಕೊಳ್ಳಬೇಕಾಗಿದೆ. ಅದು ಎಲ್ಲರ ಜವಾಬ್ದಾರಿಯೂ ಆಗಿದೆ. ಇಡೀ ನಾಡಿನ ಜನರಿಗೆ, ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಹಾಗೂ ಅಗಲಿದ ಆ ಚೇತನಕ್ಕೆ ಚಿರಶಾಂತಿ ಸಿಗಲಿ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಅವರು ಪ್ರಾರ್ಥಿಸಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಕೂಡ ತೀವ್ರ ಸಂತಾಪ ಸೂಚಿಸಿದ್ದಾರೆ. ದೊರೆಸ್ವಾಮಿ ಅವರ ನಿಧನದ ಸುದ್ದಿ ಕೇಳಿ ದಿಗ್ಬ್ರಾಂತನಾಗಿದ್ದೇನೆ. ಅವರು ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಸಕ್ರಿಯವಾಗಿ ಹೋರಾಟಗಳಲ್ಲಿ ನೇತೃತ್ವ ವಹಿಸುತ್ತಿದ್ದರು. ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿಗೆ ಎಚ್ಎಸ್ ದೊರೆಸ್ವಾಮಿ ಹಿರಿಯಣ್ಣನಂತೆ ಇದ್ದರು. ಅವರು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಮುಖರು. ತಮ್ಮ ಇಳಿವಯಸ್ಸಿನಲ್ಲಿಯೂ ಇಡೀ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು. ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೊರೆಸ್ವಾಮಿ ಅವರ ಹಠಾತ್ ನಿಧನಕ್ಕೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತೀವ್ರ ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರೇರಣೆಯಿಂದ ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೊರೆಸ್ವಾಮಿ ಅವರ ನಿಧನ ಕರ್ನಾಟಕಕ್ಕೆ ಮಾತ್ರವಲ್ಲ, ದೇಶಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. ಯುವ ಜೀವಗಳನ್ನು ನಾಚಿಸುವಂತೆ ಸಾಮಾಜಿಕ ಚಳವಳಿಗಳಲ್ಲಿ ಇನ್ನೂ ತೊಡಗಿಸಿಕೊಂಡಿದ್ದರು. ಭೂಮಿಗಾಗಿ, ಆದಿವಾಸಿಗಳಿಗಾಗಿ ಸದಾ ಮಿಡಿಯುತ್ತಾ, ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದ್ದಾರೆ.
ದೊರೆಸ್ವಾಮಿಯವರು ಇಂದು ನಮ್ಮನ್ನೆಲ್ಲ ಅಗಲಿದ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಇಳಿ ವಯಸ್ಸಿನಲ್ಲೂ ಬಡವರ ಪರ ಹೋರಾಟಕ್ಕೆ ಧುಮುಕುತ್ತಿದ್ದ ಅವರ ಉತ್ಸಾಹ ಅನುಕರಣೀಯ. ಸರ್ಕಾರಿ ಭೂ ಕಬಳಿಕೆ ವಿರುದ್ಧ ಅವರು ನಡೆಸಿದ ಹೋರಾಟ, ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು ಶ್ಲಾಘನೀಯ. ಅವರ ನಿಧನದಿಂದ ಸ್ವಾತಂತ್ರ್ಯ ಚಳವಳಿಯ ಹಿರಿಯ ಕೊಂಡಿ ಕಳಚಿದಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣ ಗೌಡ ಪ್ರಾರ್ಥಿಸಿದ್ದಾರೆ.
ದೊರೆಸ್ವಾಮಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಮಂದಿರ ಪ್ರಕಾಶನದ ಮೂಲಕ ಹಲವು ಪುಸ್ತಕಗಳನ್ನು ಅವರು ಪ್ರಕಟಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ “ಪೌರವಾಣಿ” ಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು. ಶ್ರೀ ದೊರೆಸ್ವಾಮಿ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ನಳಿನ್ ಕುಮಾರ್ ಕಟೀಲ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.