ಬೆಂಗಳೂರು : ಮೂರು ತಂಡಗಳಲ್ಲಿ ಮೂರು ಹಂತದ ಸಂಘಟನಾತ್ಮಕ ಪ್ರವಾಸ ಮಾಡಿರುವ ರಾಜ್ಯ ಬಿಜೆಪಿ ತಂಡದ ಕೊನೆಯ ಭಾಗದ ಸಮಾವೇಶ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಸರಣಿ ಸಭೆಗಳ ಮೂಲಕ ಭವಿಷ್ಯದ ಚುನಾವಣಾ ದೃಷ್ಟಿಯಿಂದ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಬಿಜೆಪಿ ಅಧಿಕೃತ ಚಾಲನೆ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಮೊದಲ ತಂಡ ಮೂರು ವಿಭಾಗದಲ್ಲಿ ಸಭೆ ಮುಗಿಸಿ ಕೊನೆಯದಾಗಿ ಇಂದು ಬೆಂಗಳೂರಿನಲ್ಲಿ ಸಭೆ ನಡೆಸಿತು. ಈಗಾಗಲೇ ಬೆಂಗಳೂರು ನಗರ ದಕ್ಷಿಣ ಜಿಲ್ಲೆ ಮತ್ತು ನಗರ ಕೇಂದ್ರ ಜಿಲ್ಲೆ ವಲಯದ ಸಭೆ ಪೂರ್ಣಗೊಳಿಸಿರುವ ತಂಡ ಇಂದು ಬೆಳಗ್ಗೆ 10.30ಕ್ಕೆ ಮತ್ತಿಕೆರೆಯಲ್ಲಿನ ಖಾಸಗಿ ಹೋಟೆಲ್ನಲ್ಲಿ ಬೆಂಗಳೂರು ನಗರ, ಉತ್ತರ ಜಿಲ್ಲೆ ವಲಯದ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಿತು. ನಂತರ ಜಿಲ್ಲಾ ಪ್ರಮುಖರ ಸಭೆ ನಡೆಸಿ ಸಂಘಟನಾತ್ಮಕ ವಿಷಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿತು.
ಬಿಬಿಎಂಪಿ ಚುನಾವಣೆ ನಡೆದಲ್ಲಿ ಯಾವ ಕಾರಣಕ್ಕೂ ಪಕ್ಷಕ್ಕೆ ಹಿನ್ನೆಡೆಯಾಗದಂತೆ ನೋಡಿಕೊಳ್ಳಬೇಕು ಎನ್ನುವ ಟಾಸ್ಕ್ ಅನ್ನು ಜಿಲ್ಲಾ ಸಮಿತಿಗಳಿಗೆ ನೀಡಲಾಯಿತು. ಭವಿಷ್ಯದ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳು ಮಹತ್ವದ್ದಾಗಿವೆ. ಯಾವ ಚುನಾವಣೆ ಬಂದರೂ ಪಕ್ಷಕ್ಕೆ ಹಿನ್ನೆಡೆಯಾಗದಂತೆ ನೋಡಿಕೊಳ್ಳಿ. ಬೂತ್ ಸಮಿತಿಗಳನ್ನು ಬಲಪಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಸಮಿತಿಗೆ ಸೂಚನೆ ನೀಡಿದರು.
ಇನ್ನು ಸಂಜೆ 5 ಗಂಟೆಗೆ ಬೆಂಗಳೂರು ವಲಯದ ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡಲಾಗಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರ್ದಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೆಂಗಳೂರು ನಗರ ದಕ್ಷಿಣ, ಕೇಂದ್ರ ಮತ್ತು ಉತ್ತರ ಜಿಲ್ಲೆಗಳ ಕಾರ್ಯಕರ್ತರು ಆಗಮಿಸಲಿದ್ದಾರೆ.
ಇದನ್ನೂ ಓದಿ: ಅಂತಿಮ ಹಂತಕ್ಕೆ ಬಿಜೆಪಿ ವಿಭಾಗೀಯ ಸಭೆ: ಇಂದು ಬೆಂಗಳೂರು ನಗರ ವಿಭಾಗದ ಸಂಘಟನಾತ್ಮಕ ಸಭೆ