ಬೆಂಗಳೂರು: ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಅಕ್ಟೋಬರ್ 10 ರಿಂದ ಆರಂಭಗೊಳ್ಳುತ್ತಿದ್ದು, ಅದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ಹಿಂದೆ ಅಧಿವೇಶನ ನಡೆದಿತ್ತಾದರೂ ಅದರು ಸಿಎಂ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಸೀಮಿತವಾದ ಅಧಿವೇಶನವಾಗಿತ್ತು.
ಈಗ ಮೂರು ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು, ನೆರೆಹಾನಿ ಪರಿಹಾರ ವಿಷಯ ಸದನದಲ್ಲಿ ಪ್ರತಿಧ್ವನಿಸಲಿದೆ. ಹಾಗಾಗಿ ಅದನ್ನು ಎದುರಿಸುವ ಹಾಗೂ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಕುರಿತು ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಬಾರಿಯ ಚಳಿಗಾಲದ ಅಧಿವೇಶನವು ಬೆಳಗಾವಿಯ ಬದಲಿಗೆ ಬೆಂಗಳೂರಲ್ಲೇ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಬಂದ ನೆರೆಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು ಪ್ರತಿಭಟನೆಯ ಭಯದಿಂದ ಈ ಅಧಿವೇಶನವನ್ನು ವಿಧಾನಸೌಧಕ್ಕೆ ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅಲ್ಲದೇ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.