ಬೆಂಗಳೂರು: ಪ್ರಶ್ನೋತ್ತರ ಕಲಾಪದ ವೇಳೆ ಜನ್ಮದಿನದ ವಿಷಯ ಪ್ರಸ್ತಾಪವಾಗಿ ವಿಧಾನಸಭೆಯಲ್ಲಿ ಹಾಸ್ಯ ಪ್ರಸಂಗ ನಡೆಯಿತು.
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಪ್ರಶ್ನೋತ್ತರ ವೇಳೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಈ ಮಧ್ಯೆ ಕಾಂಗ್ರೆಸ್ ಸದಸ್ಯ ಕೃಷ್ಣಭೈರೇಗೌಡ ಅವರು ಎದ್ದು ನಿಂತು, ಇಂದು ಸೌಮ್ಯಾ ರೆಡ್ಡಿ ಅವರ ಹುಟ್ಟುಹಬ್ಬ ಎಂದು ಸ್ಪೀಕರ್ ಅವರ ಗಮನಕ್ಕೆ ತಂದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಲ್ಲ ಸದಸ್ಯರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಈ ವೇಳೆ ಹುಣಸೂರು ಶಾಸಕ ಮಂಜುನಾಥ್ ಮಾತನಾಡಿ, ಈ ಹಿಂದೆ ಸದನ ನಡೆಯುವ ಸಂದರ್ಭದಲ್ಲಿ ಶಾಸಕರ ಜನ್ಮದಿನವಿದ್ದರೆ ಹೂಗುಚ್ಛ ನೀಡಿ ಶುಭಾಶಯ ಕೋರುತ್ತಿದ್ದರು. ಈ ಪದ್ಧತಿಯನ್ನು ಮತ್ತೆ ಮುಂದುವರಿಸುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದರು.
ಆಗ ಸ್ಪೀಕರ್ ಕಾಗೇರಿ ಈ ಸಲಹೆ ನನ್ನ ಪರಿಶೀಲನೆಯಲ್ಲಿ ಇದೆ ಎಂದರು. ಆಗ ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಮಾತನಾಡಿ, ಸರ್ಕಾರದ ರೀತಿ ಉತ್ತರ ಇದೆ ಎಂದಾಗ, ಸದನ ನಗೆಗಡಲಲ್ಲಿ ತೇಲಿತು.
ಈ ವೇಳೆ ಜೆಡಿಎಸ್ ಸದಸ್ಯ ಅನ್ನದಾನಿ ಮಾತನಾಡಿ, ನಮ್ಮ ಪಕ್ಷದ ಕಡೆಯಿಂದಲೂ ಸೌಮ್ಯಾ ಅವರಿಗೆ ಜನ್ಮದಿನದ ಶುಭಾಶಯ ಎಂದರು. ಆಗ ಸ್ಪೀಕರ್ ನಾನು ಎಲ್ಲಾ ಸದಸ್ಯರ ಪರವಾಗಿ ಅವರಿಗೆ ಶುಭ ಕೋರಿದ್ದೇನೆ ಎಂದರು. ನಂತರ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸೌಮ್ಯಾ ರೆಡ್ಡಿ ಅವರಿಗೆ ಶುಭಾಶಯ ಕೋರಿದರು.
ಇದನ್ನೂ ಓದಿ: ಎಸ್ಟಿಗೆ ಶೇ.7.5 ರಷ್ಟು ಮೀಸಲಾತಿ.. ಕಾನೂನು ಸಚಿವರ ಭರವಸೆ ಬಳಿಕ ಧರಣಿ ಕೈಬಿಟ್ಟ ಕಾಂಗ್ರೆಸ್..