ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಕ್ರೈಂ ರೇಟ್ ಹಾಗೂ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ಫೋಟೋ ಬಳಕೆ ಮಾಡುವಾಗ ಎಚ್ಚರ ಎಂದಿದ್ದರು. ಸದ್ಯ ನಗರ ಪೊಲೀಸರು ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿನ ಯು.ಎಸ್ ಬಿ ಚಾರ್ಜಿಂಗ್ ಪಾಯಿಂಟ್ಗಳಲ್ಲಿ ಮೊಬೈಲ್ ಚಾರ್ಜ್ ಮಾಡಬೇಡಿ. ಒಂದು ವೇಳೆ ಅಲ್ಲಿ ಚಾರ್ಜ್ ಮಾಡಿದರೆ ಸೈಬರ್ ಖದೀಮರು ಮಾಲ್ವೇರ್ ಬಳಸಿ ಅನಧಿಕೃತವಾಗಿ ನಿಯಂತ್ರಣ ಮಾಡಿ, ನಿಮ್ಮ ಮೊಬೈಲ್ನಲ್ಲಿ ರುವ ಬ್ಯಾಂಕ್ ಮಾಹಿತಿ ಸೇರಿದಂತೆ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆಗಳಿವೆ. ಹೀಗಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಹಾಗೂ ಇತರೆ ಕಡೆ ಜಾಗೃತರಾಗಿರಿ ಎಂದಿದ್ದಾರೆ.
ಎಚ್ಚರಿಕೆಯ ಜೊತೆಗೆ ಸೈಬರ್ ಖದೀಮರಿಂದ ಯಾವ ರೀತಿ ಎಸ್ಕೇಪ್ ಆಗಬಹುದು ಎಂಬುದಕ್ಕೆ ಸಲಹೆ ಕೂಡ ನೀಡಿದ್ದಾರೆ. ಯಾವಾಗಲು ನಿಮ್ಮ ಬಳಿ ಪವರ್ ಬ್ಯಾಂಕ್ ಇಟ್ಟುಕೊಂಡಿರಿ. ಡೇಟಾ ಟ್ರಾನ್ಸ್ಫರ್ ಮೋಡ್ ಡಿಸೇಬಲ್ ಮಾಡಿ, ಆದಷ್ಟು ಮೊಬೈಲ್ ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ, ಮೊಬೈಲ್ಗೆ ತಂಬ್ ಲಾಕ್ ಹಾಕಿ ಇಡಿ. ಈ ಸಂದರ್ಭಗಳಲ್ಲಿ ಸೈಬರ್ ಕಳ್ಳರು ವೈಯಕ್ತಿಕ ಮಾಹಿತಿ ಕದಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.