ಬೆಂಗಳೂರು: ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಲ್ಯಾಪ್ಟಾಪ್ಗಳನ್ನೇ ಹೆಚ್ಚಾಗಿ ಕಳವು ಮಾಡುತ್ತಿದ್ದ ಕಳ್ಳರನ್ನು ಮಾರತಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.
ರಜನಿಕಾಂತ್, ಸುಂದರ್, ಸೆಂದಿಲ್ ಕುಮಾರ್, ಗೋಪಾಲ, ವೆಂಕಟೇಶ್, ಸುಬ್ರಹ್ಮಣಿ, ಶಿವಕುಮಾರ್, ಮುರುಳಿ, ಮೂರ್ತಿ, ಮುರುಗನಂದಂ ಹಾಗು ಕುಮಾರ್ ಬಂಧಿತರು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ತಿರುಚ್ಚಿ ಸಮೀಪದ ರಾಮ್ ಜಿ ನಗರ ಮೂಲದ ಕಳ್ಳರ ತಂಡ ಇದಾಗಿದೆ. ತಮಿಳುನಾಡಿನ ಕೃಷ್ಣಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಹಾಗು ಉಡುಪಿ ಜಿಲ್ಲೆಗಳಲ್ಲಿ 42ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ.
ಬಂಧಿತರಿಂದ 7 ಲ್ಯಾಪ್ಟಾಪ್, 1 ಐಪ್ಯಾಡ್, 1 ಕ್ಯಾಮರಾ ಮತ್ತು 50 ಸಾವಿರ ರೂ. ನಗದು ಸೇರಿದಂತೆ ಏಳು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮಂಗಳೂರಿನ ಎಂಆರ್ಪಿಎಲ್ನ ಸಿಐಎಸ್ಎಫ್ ಯುನಿಟ್ ಇನ್ಸ್ಪೆಕ್ಟರ್ ನಾಪತ್ತೆ
ದೇಶವ್ಯಾಪಿ ಸಂಚರಿಸುತ್ತಾ ಕಳ್ಳತನದಲ್ಲಿ ತೊಡಗಿದ್ದ ಆರೋಪಿಗಳು, ತಾವು ಭೇಟಿ ನೀಡುವ ಪ್ರದೇಶದಲ್ಲಿ ಇರುವುದು ಕೇವಲ 20 ರಿಂದ 25 ದಿನಗಳು ಮಾತ್ರ. ಈ ಅವಧಿಯಲ್ಲಿ ಕಳ್ಳತನ ಮಾಡಿ ತಮ್ಮೂರು ಸೇರಿ ಬಿಡುತ್ತಿದ್ದರು. ಇವರು ನಾಲ್ಕು ತಂಡಗಳಲ್ಲಿ ದುಷ್ಕೃತ್ಯಗಳಲ್ಲಿ ತೊಡಗುತ್ತಿದ್ದರು. 12 ವರ್ಷಗಳಿಂದ ಐಟಿ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ, ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಗಮನ ಬೇರೆಡೆ ಸೆಳೆದು ಬ್ಯಾಗ್ ಎಗರಿಸಿ ಪರಾರಿ ಆಗುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.