ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣದಡಿ ಮನೆಯ ಯಾಜಮಾನ ಹಲ್ಲೆಗೆರೆ ಶಂಕರ್ ಹಾಗೂ ಆತನ ಅಳಿಯಂದಿರು ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ ಆರೋಪದಡಿ ಜೈಲುಪಾಲಾಗಿದ್ದಾರೆ.
ಈ ನಡುವೆ ಆಂಧ್ರಹಳ್ಳಿಯಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಶಂಕರ್ ಒಡೆತನದ ಮನೆ ಅನಾಥವಾಗಿದ್ದು, ಬಂಗಲೆಯಂತಹ ಮನೆಯಲ್ಲಿ ದೆವ್ವ- ಭೂತ ಇದೆ ಅಂತ ಸ್ಥಳೀಯರು ಒಂದಷ್ಟು ಕತೆಯನ್ನೂ ಕಟ್ಟಿದ್ದರು. ಅಮಾವಾಸ್ಯೆ ದಿನ ಹತ್ತಿರವಾಗುತ್ತಿದ್ದಂತೆ ಅಕ್ಕಪಕ್ಕದ ಜನ ಓಡಾಡೋಕೂ ಭಯಪಡುತ್ತಿದ್ದರು. ಕಳೆದ ಅಮಾವಾಸ್ಯೆ ಮಾರನೇ ದಿನ ಕೂಡ ಅಂತಹದ್ದೇ ಒಂದು ಘಟನೆ ನಡೆದಿದೆ. ಅದು ಮಧ್ಯರಾತ್ರಿ ಶಂಕರ್ ಮನೆಯಲ್ಲಿ ಕಗ್ಗತ್ತಿನಲ್ಲಿಯೂ ಮಂದಬೆಳಕು ನೋಡಿ ಜನರು ಗಾಬರಿಗೊಂಡಿದ್ದರು.
ಶಂಕರ್ ಮನೆಯಲ್ಲಿ ಕರೆಂಟ್ ಕಟ್ ಆಗಿ ನಾಲ್ಕು ತಿಂಗಳಾಗಿವೆ. ಹಾಗಿದ್ದರೂ ಬೆಳಕನ್ನು ನೋಡಿ ಸ್ಥಳೀಯರು ಗಾಬರಿಯಾಗಿದ್ದರು. ಕೂಡಲೇ ಶಂಕರ್ ಸಂಬಂಧಿಗೆ ಕರೆ ಮಾಡಿ ಮನೆಗೆ ಬರುವಂತೆ ಸೂಚಿಸಿದ್ದರು. ನಂತರ ಮೂರ್ನಾಲ್ಕು ಜನರು ಗಟ್ಟಿ ಮನಸ್ಸು ಮಾಡಿ ಮನೆಯೊಳಗೆ ಹೋಗಿ ಜಾಲಾಡಿದ್ರೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ದೇವರ ಮನೆ ಬಳಿ ಬಂದಾಗ ದೆವ್ವ ದೆವ್ವ ಅಂತಾ ಚೀರುತ್ತಾ ಅಪರಿಚಿತ ವ್ಯಕ್ತಿ ಹೊರಬಂದಿದ್ದ.
ಒಂದು ಕ್ಷಣಕ್ಕೆ ಅಲ್ಲಿದ್ದವರು ಹೆದರಿದ್ರು. ಆದ್ರೆ ದೆವ್ವ ದೆವ್ವ ಅಂತಾ ಚೀರಾಡಿದ ವ್ಯಕ್ತಿ ಯಾರು ಅಂತಾ ವಿಚಾರಿಸಿದಾಗ ಆತ ಶಂಕರ್ ಮನೆ ದೋಚಲು ಬಂದಿದ್ದ ಕಳ್ಳ ಎಂಬುದು ಗೊತ್ತಾಗಿದೆ. ಮೊಬೈಲ್ ಟಾರ್ಚ್ ಹಿಡಿದು ಮನೆ ಸರ್ಚ್ ಮಾಡ್ತಿದ್ದರಿಂದ ಮನೆಯಲ್ಲಿ ಬೆಳಕು ಕಂಡಿತ್ತಂತೆ.
ಇತ್ತ ಮನೆಗೆ ಜನ ಬರುತ್ತಿದ್ದಂತೆ ಕಳ್ಳ ದೇವರಮನೆ ಸೇರಿದ್ದ. ಜನ ಅಲ್ಲಿಗೂ ಬಂದಾಗ ದೆವ್ವದ ಕತೆ ಕಟ್ಟಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ. ಆ ಸಮಯಕ್ಕೆ ಸ್ಥಳೀಯರು ಆತನ ಹಿಡಿದು ಆತನಿಗೆ ಗೂಸಾ ಕೊಟ್ಟ ಬಳಿಕ ನಿಜ ಹೊರ ಹಾಕಿದ್ದಾನೆ. ಸದ್ಯ ಕಳ್ಳನನ್ನ ಭರತ್ ಕುಮಾರ್ ಎಂದು ಗುರುತಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಐವರ ಸಾವು ಪ್ರಕರಣ: ಬದುಕುಳಿದ ಪುಟ್ಟ ಕಂದನನ್ನು ಎತ್ತಿಕೊಂಡು ತಾತ ಓಡುತ್ತಿರುವ ವಿಡಿಯೋ ವೈರಲ್