ಬೆಂಗಳೂರು: ಇಲ್ಲಿನ ಕಸ್ತೂರಿನಗರದ ಡಾಕ್ಟರ್ಸ್ ಲೇಔಟ್ನಲ್ಲಿ ಕಟ್ಟಡ ಕುಸಿದ ಪ್ರಕರಣ ಸಂಬಂಧ ಬಿಬಿಎಂಪಿ ಸಹಾಯಕ ಅಭಿಯಂತರರೊಬ್ಬರನು ಅಮಾನತು ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಆದೇಶ ಹೊರಡಿಸಿದ್ದಾರೆ.
ಕಟ್ಟಡದ ಮಾಲೀಕರು ಪಾಲಿಕೆಯಿಂದ ಅನುಮತಿ ಪಡೆದಿರುವ ನಕ್ಷೆ ಮಂಜೂರಾತಿಗಿಂತಲೂ ಹೆಚ್ಚುವರಿ ಮಹಡಿಯನ್ನು ನಿರ್ಮಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸದ ಅಥವಾ ಕರ್ತವ್ಯಲೋಪ ಎಸಗಿರುವ ಸಹಾಯಕ ಅಭಿಯಂತರರಾದ ಶಂಕರಪ್ಪ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2ನೇ ಕ್ರಾಸ್, ಡಾಕ್ಟರ್ಸ್ ಲೇಔಟ್, ಚನ್ನಸಂದ್ರ, ಕಸ್ತೂರಿ ನಗರ, ಬೆನಗಾನಹಳ್ಳಿ ವಾರ್ಡ್ ಸಂಖ್ಯೆ-50 ವ್ಯಾಪ್ತಿಯಲ್ಲಿ ಐದಂತಸ್ತಿನ ಕಟ್ಟಡ ಕುಸಿದಿದೆ. ಆದರೆ ನಿವಾಸಿಗಳು ತಕ್ಷಣವೇ ಎಚ್ಚೆತ್ತು ಹೊರ ಓಡಿಬಂದಿದ್ದರಿಂದ ಯಾವುದೇ ಪ್ರಾಣಹಾಣ ಸಂಭವಿಸಿಲ್ಲ.
ಈ ಕಟ್ಟಡವು 2014 ರಲ್ಲಿ ನಿರ್ಮಾಣವಾಗಿದ್ದು, ಫಾರುಕ್ ಬೇಗ್ ಎಂಬುವರಿಗೆ ಸೇರಿದ್ದಾಗಿದೆ. ಬಿಲ್ಡಿಂಗ್ನಲ್ಲಿ ಒಟ್ಟು ಮೂರು ಕುಟುಂಬಗಳು ವಾಸಿಸುತ್ತಿದ್ದು, ಕಟ್ಟಡ ವಾಲುತ್ತಿದ್ದಂತೆಯೇ ಎಲ್ಲರೂ ಹೊರಬಂದಿದ್ದಾರೆ. ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ಕಾನೂನು ಬಾಹಿರವಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಇದರ ಜತೆಗೆ, ಈ ಕಟ್ಟಡದ ಮೇಲೆ ಪೆಂಟ್ಹೌಸ್ ಕಟ್ಟಲು ಮಾಲೀಕ ಫಾರುಕ್ ಮುಂದಾಗಿದ್ದು, ಕಾಮಗಾರಿ ಅರ್ಧದಲ್ಲಿತ್ತು. ಘಟನೆ ಸಂಭವಿಸುತ್ತಿದ್ದಂತೆಯೇ ಫಾರುಕ್ ತಲೆ ಮರೆಸಿಕೊಂಡಿದ್ದಾನೆ.
(Live Video: ಬೆಂಗಳೂರಿನಲ್ಲಿ ಮತ್ತೊಂದು ಅವಘಡ.. ಐದು ಅಂತಸ್ತಿನ ಅಪಾರ್ಟ್ಮೆಂಟ್ ಕುಸಿತ)