ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡಲು ರಾಜ್ಯ ಸರ್ಕಾರ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕಾಯ್ದೆಗೆ ತಿದ್ದುಪಡಿ ತಂದಿರುವುನ್ನು ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ.
ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ರಾಜ್ಯ ಸರ್ಕಾರ ಭಾರತೀಯ ವಕೀಲರ ಪರಿಷತ್ತನ್ನು ಸಂಪರ್ಕಿಸಬೇಕಿತ್ತು. ಆದರೆ, ಸರ್ಕಾರ ಯಾವುದೇ ಮಾಹಿತಿ ನೀಡದೆ, ಕಾಯ್ದೆಗೆ ತಿದ್ದುಪಡಿ ತಂದು ಶೇ.25ರಷ್ಟು ಸೀಟುಗಳನ್ನು ಕನ್ನಡಿಗರಿಗೆ ಮೀಸಲಿಟ್ಟಿದೆ. ಸರ್ಕಾರದ ಈ ಕ್ರಮ ಸಂವಿಧಾನ ಬಾಹಿರ. ಹೀಗಾಗಿ ಸರ್ಕಾರ ತಿದ್ದುಪಡಿ ತಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಬಿಸಿಐ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದೆ.
ಪ್ರತಿಷ್ಠಿತ ವಿವಿಯಲ್ಲಿ ಕನ್ನಡಿಗರಿಗೂ ಅವಕಾಶ ಸಿಗುವಂತೆ ರಾಜ್ಯಸರ್ಕಾರ ಕಳೆದ ಮಾರ್ಚ್ ತಿಂಗಳಲ್ಲಿ ಕಾಯ್ದೆಗೆ ತಿದ್ದಪಡಿ ತಂದಿದೆ. ಆ ಪ್ರಕಾರ ರಾಜ್ಯದಲ್ಲಿ ಕನಿಷ್ಟ 10 ವರ್ಷ ಶಿಕ್ಷಣ ಪಡೆದವರು ಎನ್ಎಲ್ಎಸ್ಐಯು ನಡೆಸುವ ಪ್ರವೇಶ ಪರೀಕ್ಷೆ ಮೂಲಕ ವಿವಿಯಲ್ಲಿ ಸೀಟು ಪಡೆಯಬಹುದಾಗಿದೆ. ಇದೀಗ ಬಿಸಿಐ ಹಾಗೂ ಇಬ್ಬರು ವ್ಯಕ್ತಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಸರ್ಕಾರದ ಆದೇಶ ರದ್ದುಪಡಿಸುವಂತೆ ಕೋರಿದ್ದಾರೆ. ಎಲ್ಲ ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠದಲ್ಲಿ ವಿಚಾರಣೆ ನಡೆಯಲಿವೆ.