ಬೆಂಗಳೂರು: ಮೂರು ಬಾರಿ ಮುಂದೂಡಲ್ಪಟ್ಟ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ನಾಳೆ ನಡೆಯಲಿದ್ದು, ಪಾಲಿಕೆ ಆವರಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಚುನಾವಣೆ ಹಿನ್ನೆಲೆ ಪೌರ ಸಭಾಂಗಣದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಬ್ಯಾರಿಕೇಡ್, ರೆಡ್ ಕಾರ್ಪೆಟ್ ಸೇರಿದಂತೆ ಜನಪ್ರತಿನಿಧಿಗಳು ಕುಳಿತುಕೊಳ್ಳುವ ಸ್ಥಳಕ್ಕೆ ನಾಮಫಲಕಗಳನ್ನು ಹಾಕಲಾಗಿದೆ. ನಾಳೆ ಬೆಳಗ್ಗೆ 8 ರಿಂದ 9-30 ವರೆಗೆ ನಾಮಪತ್ರ ಸಲ್ಲಿಕೆಯ ಬಳಿಕ, 11-30 ಕ್ಕೆ ಪ್ರಾದೇಶಿಕ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.
ಒಟ್ಟು 12 ಸ್ಥಾಯಿ ಸಮಿತಿಗೆ ತಲಾ 11 ಸದಸ್ಯರಂತೆ 132 ಸದಸ್ಯರ ಆಯ್ಕೆ ಮಾಡಬೇಕಿದೆ. ಚುನಾವಣೆಯಲ್ಲಿ 101 ಬಿಜೆಪಿ, 76 ಕಾಂಗ್ರೆಸ್ ಹಾಗೂ 14 ಜೆಡಿಎಸ್, ಪಕ್ಷೇತರ 7 ಮಂದಿ ಜನಪ್ರತಿನಿಧಿಗಳು ಸೇರಿ 198 ಮತದಾರರು ಬರಲಿದ್ದಾರೆ. ಒಟ್ಟು ಮತದಾರರ ಶೇ 33 ರಷ್ಟು ಕೋರಂ ಇದ್ದರೆ ಚುನಾವಣೆ ನಡೆಯಲಿದೆ.
ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ 200 ಮೀಟರ್ ಸುತ್ತಮುತ್ತ ಸಂಜೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಐದಕ್ಕಿಂತ ಹೆಚ್ಚು ಜನ ಗುಂಪುಗೂಡುವುದು, ಮೆರವಣಿಗೆ, ಸಭೆಗಳಿಗೆ ಅವಕಾಶವಿಲ್ಲ. ಜೊತೆಗೆ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ, ಇಂದು ರಾತ್ರಿ ಬಿಜೆಪಿ ಪಕ್ಷದ ಸಭೆಯ ಬಳಿಕ ಅಂತಿಮಗೊಳಿಸುವ ಸಾಧ್ಯತೆ ಇದೆ.