ಬೆಂಗಳೂರು: ಕೊರೊನಾ ವರ್ಷ-2020 ಅನ್ನು ಬೀಳ್ಕೊಟ್ಟು 2021 ಅನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಬೇಕೆಂದುಕೊಂಡಿದ್ದ ಸಿಲಿಕಾನ್ ಸಿಟಿ ಜನತೆಯ ಮೋಜು-ಮಸ್ತಿಗೆ ಬಿಬಿಎಂಪಿ ಎಳ್ಳು ನೀರು ಬಿಟ್ಟಿದೆ.
ನಗರದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಲಕ್ಷಾಂತರ ಮಂದಿ ಜಮಾಯಿಸಿ ಮೋಜು-ಮಸ್ತಿ ನಡೆಸುವ ಮೂಲಕ ನೂತನ ವರ್ಷವನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳುತ್ತಿದ್ದದ್ದು ವಿಶೇಷವಾಗಿತ್ತು. ಪಬ್ ಮತ್ತು ಬಾರ್ಗಳಲ್ಲಿ ನಡೆಯುತ್ತಿದ್ದ ಮೋಜು ಕೂಟಗಳು ಮತ್ತೊಂದು ಆಕರ್ಷಣೆ. ಆದರೆ, ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಈ ವರ್ಷ ಅದಕ್ಕೆ ಬಿಬಿಎಂಪಿ ಬ್ರೇಕ್ ಹಾಕಲು ತೀರ್ಮಾನಿಸಿದೆ.
ಹೀಗಾಗಿ ಬಣ್ಣ, ಬಣ್ಣದ ಲೈಟಿಂಗ್ಸ್, ಡಿಜೆ ಮ್ಯೂಸಿಕ್ನಲ್ಲಿ ಕುಣಿದು ಕುಪ್ಪಳಿಸಿ, ಕಿಕ್ಕಿರಿದು ಮತ್ತೇರಿಸಿಕೊಂಡು ತೂರಾಡುವ ಅದೆಷ್ಟೋ ಮಂದಿಯ ಆಸೆಗೆ ತಣ್ಣೀರೆರಚಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಒಂದು ವೇಳೆ ನೂತನ ವರ್ಷಾಚರಣೆಗೆ ಅವಕಾಶ ನೀಡಿದರೆ ಲಕ್ಷಾಂತರ ಜನರು ಒಂದೆಡೆ ಸೇರುತ್ತಾರೆ. ಆಗ ಸೋಂಕಿತರ ಸಂಖ್ಯೆ ಏರುವ ಸಾಧ್ಯತೆ ಇದೆ.
ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಸಂಭ್ರಮದ ಅಲೆಯಲ್ಲಿ ತೇಲುವ ಜನರು ಯಾವುದೇ ರೀತಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಿಲ್ಲ. ಎಲ್ಲರೂ ಮೈಮರೆತು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸೋಂಕು ಅಂಟಿದವರು ಒಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾದರೆ ಸಾಕು ಉಳಿದೆಲ್ಲರಿಗೂ ಸೋಂಕು ಅದಾಗಿಯೇ ಅಂಟುತ್ತದೆ. ಹೀಗಾಗಿ, ಇದ್ಯಾವ ರಗಳೆಯೇ ಬೇಡ. ಸಂಭ್ರಮಾಚರಣೆಯೇ ಬೇಡ ಎಂಬ ನಿರ್ಧಾರಕ್ಕೆ ಪಾಲಿಕೆ ಬಂದಿದೆ.
ಹೊಸ ವರ್ಷಾಚರಣೆಯ ಸಂಭ್ರಮ ಕೇವಲ ಕುಟುಂಬ ಸದಸ್ಯರೊಂದಿಗೆ ಸಂಭ್ರಮಿಸಿ. ಯಾರೊಬ್ಬರೂ ಬೀದಿಗೆ ಬರಬೇಡಿ ಎಂದು ಮನವಿ ಮಾಡಲು ನಿರ್ಧರಿಸಿದೆ. ಸದ್ಯ ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿ ಅಂತಿಮ ಆದೇಶ ಹೊರಡಿಸಲು ಪಾಲಿಕೆ ನಿರ್ಧರಿಸಿದೆ.