ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಹಾಗೂ ವಿಶೇಷ ಆಯುಕ್ತರಾದ ರಂದೀಪ್ ಡಿ ನೇತೃತ್ವದಲ್ಲಿ ಪಾಲಿಕೆ ವಾರ್ ರೂಂನಲ್ಲಿ ಆರೋಗ್ಯ ಅಧಿಕಾರಿಗಳು, ತಜ್ಞ ವೈದ್ಯರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ರಂದೀಪ್ ಡಿ, ಕೋವಿಡ್ ಡೆತ್ ಆಡಿಟ್ ಕುರಿತಂತೆ ಚರ್ಚೆ ನಡೆಸಲಾಗಿದೆ. ಯಾರು ಹೋಂ ಐಸೋಲೇಷನ್ಗೆ ಅರ್ಹರಲ್ಲ ಅಂತಹವರನ್ನು ಆಸ್ಪತ್ರೆ ಅಥವಾ ಸಿಸಿಸಿ ಕೇಂದ್ರಕ್ಕೆ ದಾಖಲಿಸುವುದು ಕಡ್ಡಾಯ ಮಾಡಲಾಗಿದೆ.
ಹೀಗಾಗಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಫಿಜಿಕಲ್ ಟ್ರಯಾಜ್ ಮಾಡುವುದು ಅನಿವಾರ್ಯವಾಗಿದ್ದು, ಕೋವಿಡ್ನ ಬೇರೆ ನೇರೆ ಲಕ್ಷಣ ಪತ್ತೆಹಚ್ಚಲು ಸಾಧ್ಯ. ಇದರಿಂದ ಆಸ್ಪತ್ರೆಗೆ ದಾಖಲಾಗುವಲ್ಲಿ ಆಗುವ ವಿಳಂಬ ತಡೆಯಲಾಗುವುದು. ಹೀಗಾಗಿ ಸಾವಿನ ಪ್ರಮಾಣ ಕಡಿಮೆ ಮಾಡಬಹುದು ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಪ್ರತೀ ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಅಗತ್ಯ. ಇದಕ್ಕೆ ಸರ್ಕಾರವೂ ಅನುಮೋದನೆ ನೀಡಿದ್ದು, 54 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣವಾಗಲಿವೆ. ಆಸ್ಪತ್ರೆಗಳ ನಿರ್ಮಾಣಕ್ಕೆ ಜಾಗಗಳು ಅಂತಿಮಗೊಳ್ಳುವವರೆಗೆ ಬಾಡಿಗೆ ಕಟ್ಟಡಗಳಲ್ಲಿ ಪಿಹೆಚ್ಸಿ ಆರಂಭಿಸಲಾಗುವುದು ಎಂದರು. ಜೊತೆಗೆ ಫೀಲ್ಡ್ ಲೆವೆಲ್ ಸಿಬ್ಬಂದಿಗಳನ್ನು ಕೂಡಾ ನಿಯೋಜಿಸಿಕೊಳ್ಳಲಾಗುವುದು ಎಂದರು.
ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ವ್ಯವಸ್ಥೆ ನೀಡಲು ಬಿಬಿಎಂಪಿ ತ್ವರಿತವಾಗಿ ಕ್ರಮಕೈಗೊಳ್ಳಲಾಗುತ್ತದೆ. ಜೊತೆಗೆ ಆಕ್ಸಿಜನ್ ಕೊರತೆ ಎರಡನೇ ಅಲೆಗಿಂತ ಕಡಿಮೆಯಾಗಿದ್ದು, ಶೇ15 ಆಕ್ಸಿಜನ್ ಬೆಡ್ ಹೆಚ್ಚಳವಾಗಿದೆ ಎಂದರು. ಕೋವಿಡ್ ರೋಗಿಯನ್ನು ಬೇಗ ಆಸ್ಪತ್ರೆಗೆ ದಾಖಲಿಸುವ ಮೂಲಕ ಐಸಿಯು ಬೆಡ್ ಬೇಡಿಕೆಯನ್ನು ಕೂಡಾ ಕಡಿಮೆ ಮಾಡಬಹುದು ಎಂದರು.
ಮಕ್ಕಳಿಗಾಗಿ ನಗರದಲ್ಲಿ ಸದ್ಯ 250 ಹಾಸಿಗೆಗಳು
ಮಕ್ಕಳ ಆಸ್ಪತ್ರೆಗಳಾದ ರೈನ್ ಬೋ, ಇಂದಿರಾ ಗಾಂಧಿ ಆಸ್ಪತ್ರೆ, ಮದರ್ ಹುಡ್ ಆಸ್ಪತ್ರೆಗಳ ಹಾಸಿಗೆ ಲಭ್ಯತೆಯನ್ನು ಪ್ರತ್ಯೇಕ ಪಟ್ಟಿ ಮಾಡಿ ಬೆಡ್ ಅಲಾಟ್ಮೆಂಟ್ ಸಿಸ್ಟಂನಲ್ಲಿ ನಮೂದಿಸಲಾಗಿದೆ. ಇದರ ಜೊತೆಗೆ ದೊಡ್ಡ ಆಸ್ಪತ್ರೆಗಳಲ್ಲಿ ಕೂಡಾ ಮಕ್ಕಳ ವಿಶೇಷ ತಜ್ಞರ ಯೂನಿಟ್ ಲಭ್ಯತೆ ಬಗ್ಗೆ ಸಿದ್ಧಮಾಡಲಾಗುತ್ತಿದೆ ಎಂದರು. ಬೆಡ್ ಬ್ಲಾಕಿಂಗ್ ಸಂದಂರ್ಭದಲ್ಲಿ ವಯಸ್ಕರಿಗೆ ಹಾಗೂ ಮಕ್ಕಳಿಗೆ ಬೇರೆ ಬೇರೆಯಾಗಿಯೇ ಸಿದ್ಧ ಮಾಡಿಡಲಾಗಿದೆ ಎಂದರು.
ಬಿಯು ನಂಬರ್ ಇಲ್ಲದಿದ್ದರೂ ಬೆಡ್ ಸಿಗಲಿದೆ
ಮೂರನೇ ಅಲೆಯಲ್ಲಿ ಯಾವುದೇ ಕಾರಣಕ್ಕೂ ಬೆಡ್ ಒದಗಿಸುವುದು ತಡವಾಗುವುದಿಲ್ಲ. ಬಿಯು ನಂಬರ್ ಇಲ್ಲದಿದ್ದರೂ ಎಸ್ಆರ್ಎಫ್ ಐಡಿ ಇದ್ದರೂ ಬೆಡ್ ಬುಕ್ ಮಾಡಲು ತಿಳಿಸಲಾಗುವುದು. ಇದನ್ನು ಕಡ್ಡಾಯವಾಗಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.