ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರ್ಯಾಯ ಮಾರ್ಗ ಥಣಿಸಂದ್ರ ಮುಖ್ಯ ರಸ್ತೆ ಹಾಗೂ ವೀರಣ್ಣ ಪಾಳ್ಯದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಣ್ಣ ಪಾಳ್ಯ ಬಳಿ 600 ಮೀ. ಉದ್ದದ 2 ಮೇಲ್ಸೇತುವೆಗಳಿವೆ. ಹೆಬ್ಬಾಳದಿಂದ ಕೆ.ಆರ್.ಪುರಂ ಕಡೆ ಹೋಗುವ ಮೇಲ್ಸೇತುವೆ ಭಾಗದಲ್ಲಿ ಡಾಂಬರೀಕರಣ ಹಾಗೂ ಮೇಲ್ಸೇತುವೆಯ ಎರಡೂ ಬದಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಸಂಚಾರಿ ಪೊಲೀಸ್ ವಿಭಾಗವು ಅನುಮತಿ ನೀಡಿದೆ. ಜನವರಿ 10ರಂದು ಕಾಮಗಾರಿ ಪ್ರಾರಂಭಿಸಿ ಜನವರಿ 22ಕ್ಕೆ ಕಾಮಗಾರಿ ಮುಗಿಸಿ, ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಈ ವೇಳೆ ಮೇಲುಸೇತುವೆ ಇಕ್ಕೆಲಗಳಲ್ಲಿ ಒ.ಎಫ್.ಸಿ ಕೇಬಲ್ಗಳು ಅಳವಡಿಸಿರುವುದನ್ನು ಕಂಡ ಆಯುಕ್ತರು, ಯಾರ ಅನುಮತಿ ಪಡೆದಿದ್ದಾರೆ. ಅವರಿಗೆ ನೆಲದಡಿ ಕೇಬಲ್ ಅಳವಡಿಸಿಕೊಳ್ಳಲು ಅನುಮತಿ ಕೊಡಿ. ಅನಧಿಕೃತ ಕೇಬಲ್ಗಳನ್ನು ಕೂಡಲೇ ತೆರವುಗೊಳಿಸಿ ಎಂದು ಸೂಚನೆ ನೀಡಿದರು.
ಥಣಿಸಂದ್ರ ಮುಖ್ಯರಸ್ತೆಯ ಔಟರ್ ರಿಂಗ್ ರೋಡ್ ನಾಗವಾರ ಜಂಕ್ಷನ್ನಿಂದ ಬಾಗಲೂರು ಕ್ರಾಸ್ವರೆಗೆ 65 ಕೋಟಿ ರೂ. ವೆಚ್ಚದಲ್ಲಿ ಒಟ್ಟು 9.5 ಕಿ.ಮೀ. ಉದ್ದ ಎರಡೂ ಬದಿ ಸೇರಿ ಸುಮಾರು 19 ಕಿ.ಮೀ. ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದೆ. (ರಾಷ್ಟ್ರೋತ್ಥಾನ ಮೇಲುಸೇತುವೆ 1 ಕಿ.ಮೀ. ಹೊರತುಪಡಿಸಿ) 18 ಕಿ.ಮೀ. ರಸ್ತೆಯಲ್ಲಿ ಎರಡೂ ಬದಿ ಸೇರಿ 60 ದಿನಗಳಲ್ಲಿ 11.5 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಬೇರೆ ಸಂಸ್ಥೆಗಳ ಕೆಲಸವೂ 45 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಆಯುಕ್ತರು ತಿಳಿಸಿದರು.
ಥಣಿಸಂದ್ರ ಮುಖ್ಯರಸ್ತೆ ಔಟರ್ ರಿಂಗ್ ರೋಡ್ ಮೂಲಕ ಬಾಗಲೂರು ಮುಖ್ಯ ರಸ್ತೆಗೆ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಯಾಗಿದೆ. ಜಲಮಂಡಳಿ, ಬೆಸ್ಕಾಂ ಕಾಮಗಾರಿಗಳು ಮುಗಿದ ಬಳಿಕ ತ್ವರಿತವಾಗಿ ರಸ್ತೆ ಕಾಮಗಾರಿ ನಡೆಸಿ, ಪೂರ್ಣಗೊಳಿಸಲಾಗುವುದು ಎಂದರು.
ಬಳ್ಳಾರಿ ರಸ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಮುಖ ರಸ್ತೆಯಾಗಿದೆ. ಥಣಿಸಂದ್ರ ಮುಖ್ಯ ರಸ್ತೆ, ಹೆಣ್ಣೂರು ಮುಖ್ಯ ರಸ್ತೆ ಹಾಗೂ ಕೋಗಿಲು ರಸ್ತೆ ಪರ್ಯಾಯ ರಸ್ತೆಗಳಾಗಿವೆ. ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಈಗಾಗಲೇ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೆಣ್ಣೂರು ಮುಖ್ಯ ರಸ್ತೆ ಹಾಗೂ ಕೋಗಿಲು ರಸ್ತೆಗಳಲ್ಲಿ ಮುಂದಿನ ದಿನಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.
ನಗರದಲ್ಲಿ ಇದೇ ಮೊದಲ ಬಾರಿಗೆ ರಸ್ತೆ ಕತ್ತರಿಸುವಿಕೆಯನ್ನು ತಡೆಗಟ್ಟುಲು ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ರಸ್ತೆ ನಡುವೆ 15 ಸ್ಥಳಗಳಲ್ಲಿ ವಿಶೇಷ ಚೇಂಬರ್ಗಳನ್ನು ಅಳವಡಿಸಲಾಗಿದ್ದು, ಆಯುಕ್ತರು ಚೇಂಬರ್ ಪರಿಶೀಲನೆ ನಡೆಸಿದರು.
ಇನ್ನು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಸಿಗ್ನಲ್ ರಹಿತ ವಾಹನ ಸಂಚಾರ ಒದಗಿಸಲು 25 ಕೋಟಿ ರೂ. ವೆಚ್ಚದಲ್ಲಿ ಮೇಲುಸೇತುವೆ ನಿರ್ಮಿಸಿ ಈಗಾಗಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೇಲುಸೇತುವೆಯು ಒಟ್ಟು 459 ಮೀಟರ್ ಉದ್ದವಿದ್ದು, 4 ಪಥಗಳನ್ನು ನಿರ್ಮಿಸಲಾಗಿದೆ ಎಂದರು.