ಬೆಂಗಳೂರು: ಕೋವಿಡ್ ಲಸಿಕೆಯನ್ನು ಮೊದಲ ಹಂತದಲ್ಲಿ ಐವತ್ತು ಸಾವಿರ ಜನರಿಗೆ ಕೊಡಲಾಗುತ್ತಿದ್ದು, ಇಂದು ಸಹ ಇಪ್ಪತ್ತು ಸಾವಿರ ಜನರಿಗೆ ಕೊಡುವ ಕೆಲಸ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಲಸಿಕೆ ವಿತರಣೆ ಪ್ರಗತಿ ಬಗ್ಗೆ ಮಾತನಾಡಿದ ಅವರು, ನಾವು ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಪ್ರಯತ್ನಿಸಿದರೂ ಕೂಡ ಶೇ. 50, 60ರಷ್ಟು ಜನ ಮಾತ್ರ ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಹೀಗಾಗಿ ಅರಿವು ಮೂಡಿಸುವ ಕೆಲಸ ಕೂಡ ಆಗುತ್ತಿದೆ. ಮೊದಲ ಹಂತದ ವ್ಯಾಕ್ಸಿನೇಷನ್ ಮುಗಿಸಲು ಡೆಡ್ಲೈನ್ ನೀಡಿಲ್ಲ. ಆದರೂ ಇದೇ ವೇಗದಲ್ಲಿ ಕೆಲಸ ನಿರ್ವಹಿಸಿದರೆ ಮುಂದಿನ ಹತ್ತು ದಿನಗಳಲ್ಲಿ ವ್ಯಾಕ್ಸಿನೇಷನ್ ಸಂಪೂರ್ಣಗೊಳ್ಳಲಿದೆ ಎಂದರು.
ಇನ್ನು ಎರಡನೇ ಹಂತದ ಫ್ರಂಟ್ ಲೈನ್ ಕೋವಿಡ್ ವಾರಿಯರ್ಸ್ ಲಿಸ್ಟ್ ಕೂಡ ಸಿದ್ಧಪಡಿಸಿದ್ದು, 30 ಸಾವಿರ ಜನ ಇದರಡಿ ಬರುತ್ತಾರೆ. ಪಾಲಿಕೆಯ ಎಲ್ಲಾ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಇರಲಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯಂತೆ ಎರಡನೇ ಹಂತದ ಲಸಿಕೆ ವಿತರಣೆ ಆರಂಭವಾಗಬಹುದು. ಮೊದಲನೇ ಡೋಸ್ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಿಗೆ 28ನೇ ದಿನದ ಬಳಿಕ ಎರಡನೇ ಡೋಸ್ ಕೊಡಲು ಸಿದ್ಧತೆಯಾಗಿದೆ. ಜೊತೆಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲು ಪ್ರತ್ಯೇಕ ವ್ಯವಸ್ಥೆ ಇದ್ದು, ವ್ಯಾಕ್ಸಿನೇಟರ್ ಹಾಗೂ ಸ್ಥಳಗಳು ಸಹ ಪ್ರತ್ಯೇಕವಾಗಿವೆ ಎಂದರು.
ಇನ್ನು ಕೆಲ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.