ಬೆಂಗಳೂರು: ಇಂದಿನಿಂದ ಅನ್ಲಾಕ್ 3 ಜಾರಿಯಾಗಿದ್ದು ನಗರಾದ್ಯಂತ ವಾಹನ ಸಂಚಾರ, ವಾಣಿಜ್ಯ ಚಟುವಟಿಕೆಗಳು, ಸರ್ಕಾರಿ ಕಚೇರಿಗಳು ಶೇ.100 ರಷ್ಟು ತೆರೆಯಲಾಗಿದೆ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಮತ್ತೆ ಕೊರೊನಾ ಹರಡುವ ಭೀತಿ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತರು, ಜನರ ಸಹಕಾರದಿಂದ ಈವರೆಗೆ ಕೋವಿಡ್ ತೀವ್ರ ಇಳಿಕೆಯಾಗಿತ್ತು. ಮುಂದಿನ ದಿನಗಳಲ್ಲೂ ಜನರು ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಇಡಬಹುದು. ಇಲ್ಲವಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲಿದೆ. ಎಲ್ಲರೂ ಲಸಿಕೆ ಪಡೆಯಬೇಕು, 50% ಕ್ಕಿಂತ ಹೆಚ್ಚು ಜನರು ಮೊದಲ ಡೋಸ್ ಪಡೆದಿದ್ದಾರೆ. ಇದರಿಂದಾಗಿ ಆಸ್ಪತ್ರೆಗೆ ಹೋಗುವ ಸಂದರ್ಭ ಕಡಿಮೆ ಆಗಲಿದೆ ಎಂದರು.
80% ಜನರಿಗೆ ಕೋವಿಡ್ ಲಸಿಕೆ ಲಭ್ಯವಾಗದಿದ್ದರೆ ಮೂರನೇ ಅಲೆ ನಗರದಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜುಲೈ ಅಂತ್ಯದೊಳಗೆ 70% ರಷ್ಟು ವ್ಯಾಕ್ಸಿನ್ ಹಂಚಲಾಗುವುದು. ನಗರದಲ್ಲಿ ಲಸಿಕೆಗೆ ಬೇಡಿಕೆ ಇದ್ದಿದ್ದು, ಲಭ್ಯತೆ ಹೆಚ್ಚಾಗಬೇಕಿದೆ. ರಾಷ್ಟ್ರಮಟ್ಟದಲ್ಲೇ ಲಸಿಕೆ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯಕ್ಕೆ ಬರುವ ಪಾಲಿನಲ್ಲಿ ನಗರಕ್ಕೂ ಸಿಗಲಿದೆ. ಖಾಸಗಿ ಆಸ್ಪತ್ರೆಗಳಿಗೂ ಕೂಡ 25% ರಷ್ಟು ಮೀಸಲಾತಿ ಇಡಲಾಗಿದೆ. ಪೂರೈಕೆ ಆಧರಿಸಿ ಲಸಿಕೆಯನ್ನು ವೇಗವಾಗಿ ಹಂಚಲಾಗುವುದು ಎಂದರು.