ಬೆಂಗಳೂರು: ಕೊರೊನಾ ಸಂದರ್ಭದಲ್ಲಿಯೂ ನಗರದ ಸ್ವಚ್ಛತೆ ಕಾಪಾಡುತ್ತಿರುವ ಪೌರಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಆಟೋ, ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ ವಾಹನ ಚಾಲಕರಿಗೂ ಕೆಲ ಸೌಲಭ್ಯ ನೀಡಲು ಬಿಬಿಎಂಪಿ ಮುಂದಾಗಿದೆ.
- ಪೌರಕಾರ್ಮಿಕರಿಗೆ ಅಗತ್ಯವಿರುವ ಗ್ಲೌಸ್, ಮಾಸ್ಕ್, ಫೇಸ್ ಶೀಲ್ಡ್, ಡೆಟಾಲ್ ಸೋಪ್ ನೀಡುವುದು ಮತ್ತು ಮಸ್ಟರಿಂಗ್ ಸೆಂಟರ್ಗಳಲ್ಲಿ ಥರ್ಮಲ್ ಸೆನ್ಸಾರ್, ದೇಹದ ಉಷ್ಣತೆ ಚೆಕಪ್ ಮಾಡುವುದು.
- ಸ್ವಚ್ಛತಾ ಕೆಲಸಗಾರರು 2-3 ಮೀಟರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅನಾರೋಗ್ಯ ಉಂಟಾದಲ್ಲಿ ಕೂಡಲೇ ಸೂಕ್ತ ಆಸ್ಪತ್ರೆಗಳಿಗೆ ದಾಖಲಿಸುವುದು, ಮುಂದಿನ ಅಗತ್ಯ ಚಿಕಿತ್ಸೆಗಾಗಿ ವಲಯದ ಆರೋಗ್ಯ ವೈದ್ಯಾಧಿಕಾರಿಗಳಿಗೆ ವರದಿ ನೀಡಿ ಕಳುಹಿಸುವ ವ್ಯವಸ್ಥೆ ಮಾಡುವುದು.
- ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಗಾಗಿ 50 ವರ್ಷ ಮೇಲ್ಪಟ್ಟ ಪೌರಕಾರ್ಮಿಕರು ಹಾಗೂ ಗರ್ಭಿಣಿಯರನ್ನು ಗುರುತಿಸಿ, ಅವರಿಗೆ ವೇತನ ಸಹಿತ ರಜೆಯನ್ನು ನೀಡುವ ಅಗತ್ಯತೆ ಕಂಡು ಬಂದಲ್ಲಿ ವಲಯದ ಅಧೀಕ್ಷಕ ಅಭಿಯಂತರರು ಮತ್ತು ಜಂಟಿ ಆಯುಕ್ತರ ಮುಖೇನ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಯಾರಾದರೂ ಕರ್ತವ್ಯನಿರತ ಗುತ್ತಿಗೆ ಸ್ವಚ್ಛತಾ ಕೆಲಸಗಾರರು ಮೃತಪಟ್ಟರೆ...
- ಮೃತ ಸ್ವಚ್ಛತಾ ಕೆಲಸಗಾರರ ಅಂತ್ಯ ಸಂಸ್ಕಾರಕ್ಕೆ ಕೂಡಲೇ 20 ಸಾವಿರ ನೀಡಲು ಕ್ರಮ ವಹಿಸುವುದು.
- ಮೃತರ ಕುಟುಂಬದ ಸದಸ್ಯರಿಗೆ ಅಥವಾ ಅವಲಂಬಿತರೊಬ್ಬರಿಗೆ ಸ್ವಚ್ಛತಾ ಕಾರ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವುದು.
- ಮೃತರ ಕುಟುಂಬಕ್ಕೆ ಪರಿಹಾರಧನ ನೀಡಲು ಕೂಡಲೇ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ವಿಶೇಷ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ.