ಬೆಂಗಳೂರು: ರಾಜ್ಯದ ಪೊಲೀಸರಿಗೆ ನೆರೆ ರಾಜ್ಯಗಳ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.
ಔರಾದ್ಕರ್ ಸಮಿತಿ ನೀಡಿದ ಶಿಫಾರಸಿನ ಅನ್ವಯ ರಾಜ್ಯದ ಪೊಲೀಸರಿಗೆ ವೇತನ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದ್ದರೂ ನೆರೆ ರಾಜ್ಯಗಳ ಪೊಲೀಸರಿಗೂ, ನಮ್ಮ ರಾಜ್ಯದ ಪೊಲೀಸರಿಗೂ ವೇತನದಲ್ಲಿ ಅಂತರವಿದೆ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಸಮಿತಿಯನ್ನು ರಚಿಸಿದೆ.
ಪ್ರಶ್ನೋತ್ತರ ವೇಳೆಯಲ್ಲಿ ಎನ್.ಮಹೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ವಿಷಯ ತಿಳಿಸಿದರಲ್ಲದೆ ಕೋವಿಡ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಮೂರು ಸಾವಿರ ರೂ.ಗಳಂತೆ ವಿಶೇಷ ಭತ್ಯೆ ನೀಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಔರಾದ್ಕರ್ ಅವರು ನೀಡಿದ ಶಿಫಾರಸಿನ ಅನ್ವಯ ಎಲ್ಲಾ ಹಂತದ ಪೊಲೀಸರಿಗೆ ವೇತನ, ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಆದರೆ ಇದು ಸಾಲುವುದಿಲ್ಲ ಎಂಬ ಕಾರಣಕ್ಕಾಗಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು.
ಈ ಹಿಂದೆ 22 ಸಾವಿರ ರೂಪಾಯಿ ಮೂಲ ವೇತನ ಪಡೆಯುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಈಗ 35 ಸಾವಿರ ರೂ.ಗಳಷ್ಟು ಮೂಲ ವೇತನ ಪಡೆಯುತ್ತಿದ್ದಾರೆ. ಇದೇ ರೀತಿ ಕಾನ್ಸ್ಟೇಬಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಎಲ್ಲಾ ಹಂತಗಳಲ್ಲೂ ವೇತನ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗೆ ಮಾಡುವ ಮೂಲಕ ರಾಜ್ಯದ ಕಂದಾಯ ಇಲಾಖೆಯ ನೌಕರರಿಗೆ ನೀಡಲಾಗುತ್ತಿದ್ದ ವೇತನದ ಪ್ರಮಾಣಕ್ಕೆ ಸರಿಸಮನಾಗಿ ಪೊಲೀಸರಿಗೆ ವೇತನ ನೀಡಲಾಗಿದೆ. ಆ ಮೂಲಕ ಇದ್ದ ತಾರತಮ್ಯವನ್ನು ನಿವಾರಿಸಲಾಗಿದೆ. ಆದರೆ ಪೊಲೀಸರಿಗೆ ನೆರೆ ರಾಜ್ಯಗಳ ಮಾದರಿಯಲ್ಲಿ ವೇತನ ಮತ್ತಿತರ ಸವಲತ್ತುಗಳನ್ನು ನೀಡಬೇಕೆಂಬ ಬೇಡಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸರ್ಕಾರ ಮುಂದಡಿ ಇಟ್ಟಿದೆ. ಡಿಜಿಪಿ ಅಧ್ಯಕ್ಷತೆಯ ಸಮಿತಿ ವರದಿ ನೀಡಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಬೇರೆ ಬೇರೆ ರಾಜ್ಯಗಳಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಪರಿಶೀಲಿಸಿ, ನಂತರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನ ತಾರತಮ್ಯವನ್ನು ಸರಿಪಡಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಒಂದು ಸಾವಿರ ರೂ. ಭತ್ಯೆ ನೀಡಲಾಗಿದೆ. ಆರೋಗ್ಯ ಭಾಗ್ಯ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಬಾಕಿಯಿರುವ 4 ವೃಂದದ ಅಧಿಕಾರಿ ಮತ್ತು ಸಿಬ್ಬಂದಿಯ ವೇತನ ಶ್ರೇಣಿಯನ್ನು ಪರಿಷ್ಕರಿಸುವ ಕುರಿತಂತೆ ಸರ್ಕಾರದ ಪರಿಶೀಲನೆಯಲ್ಲಿದೆ. 6ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಶೀಲಿಸಲು ರಚಿಸಿದ ಸಮಿತಿಯು ನೀಡುವ ವರದಿಯನ್ನು ಪರಿಶೀಲಿಸಿದ ಸರ್ಕಾರ 5 ವಿವಿಧ ವೃಂದದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಪರಿಷ್ಕರಿಸಿದೆ. ಸಮವಸ್ತ್ರ, ಸಾರಿಗೆ, ಕಷ್ಟ ಪರಿಹಾರ ಭತ್ಯೆಗಳನ್ನು ಮಂಜೂರು ಮಾಡಲಾಗಿದೆ. ಸಮಿತಿಯ ಶಿಫಾರಸು ಅನುಷ್ಠಾನದಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 84,773 ಅಧಿಕಾರಿ ಮತ್ತು ಸಿಬ್ಬಂದಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ 89,333 ವಿವಿಧ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್‍ನಿಂದ ಮೃತಪಡುವ ಪೊಲೀಸರಿಗೆ 30 ಲಕ್ಷ ರೂ. ಪರಿಹಾರ:
ಕೋವಿಡ್‍ನಿಂದ ಮೃತಪಟ್ಟ ಪೊಲೀಸ್ ಇಲಾಖೆಯ ಸಿಬ್ಬಂದಿಗೂ, ಕೊರೊನಾ ವಾರಿಯರ್ಸ್ಗೆ ನೀಡುವ 30 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ಸಚಿವ ಬೊಮ್ಮಾಯಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್ ಇಲಾಖೆಯಿಂದ ನೀಡುವ ಪರಿಹಾರ, ವಿಮಾ ಪರಿಹಾರ ಹೊರತುಪಡಿಸಿ ಹೆಚ್ಚುವರಿಯಾಗಿ ಕೋವಿಡ್ ಪರಿಹಾರವನ್ನೂ ನೀಡಲಾಗುವುದು ಎಂದರು.
2019-20 ಮತ್ತು 2020-21ನೇ ಸಾಲಿನಲ್ಲಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ 41 ಮಂದಿ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳು ಮೃತಪಟ್ಟಿದ್ದಾರೆ. ಈ ಪೈಕಿ 22 ಮಂದಿ ಮೃತಪಟ್ಟವರ ಕುಟುಂಬದವರಿಗೆ ವಿಮಾ ಕಂಪನಿಯ ಮೂಲಕ 20 ಲಕ್ಷ ರೂ.ನಂತೆ 4.40 ಕೋಟಿ ರೂ. ನೀಡಲಾಗಿದೆ. ಬಾಕಿ ಉಳಿದಿರುವ 19 ಮಂದಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ವಿಮಾ ಕಂಪನಿಯಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ 2002ರಿಂದ ಆರೋಗ್ಯ ಭಾಗ್ಯ ಯೋಜನೆ ಜಾರಿಯಲ್ಲಿದ್ದು, ಮಾನ್ಯತೆ ಪಡೆದಿರುವ 179 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಆ ಆಸ್ಪತ್ರೆಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುತ್ತಿದೆ. ಸಿಬಿಎಚ್‍ಎಸ್‍ನಲ್ಲಿ ನಿಗದಿಯಾಗದ ಪ್ರಕ್ರಿಯೆಗಳಿಗೆ ಆರೋಗ್ಯ ಭಾಗ್ಯ ಯೋಜನೆ ಟ್ರಸ್ಟ್ ವತಿಯಿಂದ ಮಂಜೂರಾತಿ ನೀಡಲಾಗುತ್ತಿದೆ ಎಂದು ತಿಳಿಸಿದರು.