ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಪರಿಷತ್, ರಾಜಕೀಯ ಪುನರ್ವಸತಿ ಕೇಂದ್ರದಂತಾಗುತ್ತಿರುವುದು ದುರದೃಷ್ಟಕರ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 114 ವರ್ಷ ಇತಿಹಾಸವಿರುವ ಪರಿಷತ್‍ಗೆ ತನ್ನದೇ ಆದ ಘನತೆಯಿದೆ. ಅದಕ್ಕೆ ಚ್ಯುತಿಯಾಗದಂತೆ ಉಳಿಸಿ ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಕಿರಿಯ ವಯಸ್ಸಿನವರೇ ಹೆಚ್ಚಾಗಿ ಆರಿಸಿ ಬಂದಿದ್ದು, ಸೂಕ್ತ ತರಬೇತಿ, ಮಾಹಿತಿ ನೀಡಲು ಕ್ರಮ ವಹಿಸಲಾಗುತ್ತಿದೆ. ಪರಿಷತ್‍ಗೆ ಸಾಧ್ಯವಾದಷ್ಟು ಪ್ರಬುದ್ಧರಿಗೆ ಆದ್ಯತೆ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಕೊಠಡಿಗೆ ಮನವಿ:
ವಿಧಾನ ಪರಿಷತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಕನಿಷ್ಠ 5 ಹೆಚ್ಚುವರಿ ಕೊಠಡಿ ಹಂಚಿಕೆ ಮಾಡಿಕೊಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಸಭಾಪತಿ ತಿಳಿಸಿದರು.
ಪರಿಷತ್ ಸಚಿವಾಲಯ ಕಚೇರಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಪರಿಷತ್ ಸಚಿವಾಲಯದ ಕಚೇರಿಗಳಿಗೆ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಪರಿಷತ್ ಕಾರ್ಯಾದರ್ಶಿ ಕೆ.ಆರ್. ಮಹಾಲಕ್ಷ್ಮಿ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು.
ನೆಲಮಹಡಿಯಲ್ಲಿರುವ ವರದಿಗಾರರ ಶಾಖೆಯಲ್ಲಿ 36 ಅಧಿಕಾರಿ, ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಕೊಠಡಿ ಕಿರಿದಾಗಿರುವ ಜತೆಗೆ ಗಾಳಿ-ಬೆಳಕಿನ ಕೊರತೆ ಇರುವುದನ್ನು ಪರಿಶೀಲಿಸಲಾಯಿತು ಎಂದು ತಿಳಿಸಿದರು.
ಬದಲಿ ಕೊಠಡಿ ವ್ಯವಸ್ಥೆ ಮಾಡಿಕೊಡಬೇಕು. ಜತೆಗೆ ಸಚಿವಾಲಯಕ್ಕೆ ಹೆಚ್ಚುವರಿಯಾಗಿ 5 ಕೊಠಡಿ ಹಂಚಿಕೆ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳಿಗೆ ಕೋರಲಾಗಿದೆ. ಪರಿಷತ್ ಸಚಿವಾಲಯದಲ್ಲಿ 365 ಹುದ್ದೆ ಪೈಕಿ 56 ಖಾಲಿ ಇದ್ದು, ಭರ್ತಿಗೆ ಕ್ರಮ ವಹಿಸುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ.
ಶಾಸಕರ ಭವನದಲ್ಲಿನ ಪಂಚಕರ್ಮ ಸೇವೆಗೆ ಮೂರು ಮಂದಿ ಥೆರಪಿಸ್ಟ್ ಹಾಗೂ ಇಬ್ಬರು ವೈದ್ಯರನ್ನು ಸಚಿವಾಲಯದಿಂದಲೇ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕೋರಲಾಗಿದೆ ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಪರಿಷತ್‍ಗೆ ಆರ್ಥಿಕ ಸ್ವಾಯತ್ತತೆ ಇದ್ದು, ಪ್ರತ್ಯೇಕ ಸಚಿವಾಲಯವಿದೆ. ಅದೇ ರೀತಿ ರಾಜ್ಯದಲ್ಲೂ ಆರ್ಥಿಕ ಸ್ವಾಯತ್ತತೆ ರೂಪದ ವ್ಯವಸ್ಥೆ ತಂದರೆ ಉತ್ತಮ. ರಾಜ್ಯಸಭೆ ಮಾದರಿಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಅಳವಡಿಕೆಗೆ ಪ್ರಯತ್ನ ನಡೆಸಲಾಗುವುದು. ಪರಿಷತ್‍ಗೆ 115 ವರ್ಷ ಪೂರೈಸಿದ ಸಂದರ್ಭದಲ್ಲಿ ಅಂಚೆ ಲಕೋಟೆ ತರಲಾಗುವುದು ಎಂದು ಹೇಳಿದರು.
ಓದಿ: ಪವಿತ್ರ ಗಂಗಾನದಿಯಲ್ಲಿ ಮಿಂದೇಳುತ್ತಿರುವ ಭಕ್ತರು: ಪೊಂಗಲ್ ಆಚರಿಸಿದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್