ಬೆಂಗಳೂರು: ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಅವರ ಅನುಭವಕ್ಕೆ ತಕ್ಕುದಾದ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಲು ನಮ್ಮ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಆ ಮೂಲಕ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಫಿಕ್ಸ್ ಎನ್ನುವ ಸುಳಿವು ನೀಡಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿ ಬಸವರಾಜ ಹೊರಟ್ಟಿ ಪಕ್ಷ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿಯವರು 45 ವರ್ಷದಿಂದ ವಿಧಾನಪರಿಷತ್ ಸದಸ್ಯರಾಗಿ, ಸಭಾಪತಿಯಾಗಿ, ಮಂತ್ರಿಗಳಾಗಿ ಅಪಾರ ಅನುಭವ ಹೊಂದಿರುವ ಹಿರಿಯರು. ಅವರು ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ. ಶಿಕ್ಷಕರನ್ನು ಸಂಘಟನೆ ಮಾಡಿ ಅವರ ಸಮಸ್ಯೆಯನ್ನು ನಿರಂತರವಾಗಿ ಪರಿಹರಿಸಿಕೊಂಡು ಬಂದಿದ್ದಾರೆ ಎಂದರು.
ಬೃಹತ್ ಕಾರ್ಯಕ್ರಮ ಮೂಲಕ ಪಕ್ಷಕ್ಕೆ ಸ್ವಾಗತ: ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಲಿದ್ದೇವೆ. ನಂತರ ಆ ಭಾಗದಲ್ಲಿ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ಅವರ ಸುದೀರ್ಘ ಸಾರ್ವಜನಿಕ ಜೀವನದ ಅನುಭವ ಪಡೆದುಕೊಳ್ಳಲಿದ್ದೇವೆ. ಬಹುತೇಕವಾಗಿ ಇಷ್ಟು ನಿರಂತರವಾಗಿ ವಿಧಾನ ಪರಿಷತ್ತನ್ನು ಪ್ರತಿನಿಧಿಸುವ ದಾಖಲೆ ಇಲ್ಲಿಯವರೆಗೂ ಯಾರೂ ಮಾಡಿಲ್ಲ. ಇಡೀ ದೇಶದಲ್ಲೇ ಈ ರೀತಿಯ ದಾಖಲೆ ಇಲ್ಲ. ಅಂತಹ ಹಿರಿಯ ನಾಯಕನನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವಾಗಿದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಬಾರಾಮುಲ್ಲಾ ಗ್ರೆನೇಡ್ ದಾಳಿ: ರಾಷ್ಟ್ರೀಯ ಹೆದ್ದಾರಿ ತಡೆದು ಮೃತನ ಕುಟುಂಬಸ್ಥರಿಂದ ಪ್ರತಿಭಟನೆ