ಬೆಂಗಳೂರು: ಸಲೂನ್ ಶಾಪ್ ತೆರೆಯಲು ಸರ್ಕಾರ ವಿಧಿಸಿರುವ ನಿಯಮಗಳಿಂದ ಆರ್ಥಿಕ ಹೊರೆಯಾಗುತ್ತಿದೆ. ಎರಡು ತಿಂಗಳಿಂದ ಕೆಲಸವಿರಲಿಲ್ಲ. ಈಗ ಅಂಗಡಿ ತೆರೆದಿದ್ದರೂ ಹೇಳಿಕೊಳ್ಳುವ ಮಟ್ಟದಲ್ಲಿ ಗ್ರಾಹಕರು ಬರುತ್ತಿಲ್ಲ. ಈಗ ವಿಧಿಸಿರುವ ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಲಿ, ಇಲ್ಲದಿದ್ದರೇ ಸರ್ಕಾರವೇ ಕ್ಷೌರಿಕರಿಗೆ ಪಿಪಿಟಿ ಕಿಟ್ ನೀಡಲಿ ಎಂದು ಕ್ಷೌರಿಕ ಅಂಗಡಿಗಳ ಮಾಲೀಕರು ಒತ್ತಾಯಿಸಿದರು.
ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಅಂಗಡಿ ತೆಗೆಯಲು ಅನುಮತಿ ನೀಡಿದೆ. ಆದರೆ, ಕೆಲಸ ಮಾಡುವವರು ಸ್ಯಾನಿಟೈಸರ್, ಮಾಸ್ಕ್ ಹಾಗೂ ಟೋಪಿ ಹಾಕುವುದು ಕಡ್ಡಾಯ ಮಾಡಿದೆ. ಒಬ್ಬ ಗ್ರಾಹಕರಿಗೆ ಬಳಸಿದ ಟವೆಲ್ ಇನ್ನೊಬ್ಬರಿಗೆ ಬಳಸುವಂತಿಲ್ಲ. ಪೇಪರ್ ಸೀಟ್ ಬಳಸಬೇಕು ಎಂದು ಆದೇಶ ನೀಡಿದೆ. ಬರುವ ಗ್ರಾಹಕರ ದುಡ್ಡು ಇವುಗಳಿಗೆ ವೆಚ್ಚ ಮಾಡಬೇಕಾಗುತ್ತದೆ. ಇದರಿಂದಾಗಿ ಪ್ರತಿ ಗ್ರಾಹಕರ ಮೇಲೆ 50 ರೂ. ಅಧಿಕ ಖರ್ಚಾಗುತ್ತದೆ ಎಂದು ಕ್ಷೌರಿಕ ಲಕ್ಷ್ಮಿ ಪ್ರಸನ್ನ ಅಲವತ್ತುಕೊಂಡರು.
ಇದರ ಜೊತೆಗೆ ಕತ್ತರಿ ಹಾಗೂ ಕಟಿಂಗ್ಗೆ ಬಳಸುವ ಸಾಧನಗಳನ್ನು ಸ್ಟೆರಲೈಜ್ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ, ಈ ಸ್ಟೆರಲೈಜ್ ಮಿಷನ್ 2,500-3,000 ರೂ. ಬೆಲೆ ಇದೆ. ಚಿಕ್ಕ ಅಂಗಡಿ ಇಟ್ಟುಕೊಂಡಿರುವ ಕ್ಷೌರಿಕರಿಗೆ ಅದು ಹೊರೆಯಾಗುತ್ತಿದೆ. ಸಾಮಾನ್ಯವಾಗಿ ಕಟಿಂಗ್, ಶೇವಿಂಗ್ಗೆ ಕ್ರಮವಾಗಿ 100 ಮತ್ತು 50 ರೂ. ಪಡೆಯುತ್ತೇವೆ. ಈಗ ಸ್ಯಾನಿಟೈಸರ್, ಮಾಸ್ಕ್, ಯೂಸ್ ಡ್ ಥ್ರೋ ಟವೆಲ್ಗಳ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲು ಸಾಧ್ಯವಾಗುವುದಿಲ್ಲ. ಹಾಗೆ ಮಾಡಿದರೆ ಗ್ರಾಹಕರ ಸಂಖ್ಯೆ ಕಡಿಮೆ ಆಗಲಿದೆ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.
ಸರ್ಕಾರವೇ ಕ್ಷೌರಿಕರಿಗೆ ಪಿಪಿಟಿ ಕಿಟ್ ವಿತರಿಸಿದರೆ ಅನುಕೂಲವಾಗಲಿದೆ. ಸರ್ಕಾರದ ಈ ನಿಯಮಗಳು ಹೈಟೆಕ್ ಸಲೂನ್ ಶಾಪ್ಗಳಿಗೆ ಅಷ್ಟು ಹೊರೆಯಾಗಲ್ಲ. ಅವರನ್ನು ಗಮನದಲ್ಲಿ ಇಟ್ಟುಕೊಂಡು ಉಳಿದವುಗಳಿಗೆ ಒಂದೇ ನಿಯಮ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.