ಬೆಂಗಳೂರು : ಇವತ್ತು ಬೆಳ್ಳಂ ಬೆಳಗ್ಗೆ ಉದ್ಯಾನನಗರಿಯ ಜನ ರಸ್ತೆಗಿಳಿದಿದ್ದರು. ವಿಕೆಂಡ್ ಬಂದರೆ ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡ್ತಿದ್ದ ನಗರದ ಮಂದಿ ಇವತ್ತು ಪ್ರಕೃತಿ ಮಡಿಲಲ್ಲಿ ನಿಂತು ಹಸಿರ ವಾತಾವರಣ ಉಳಿಸುವಂತೆ ಪ್ರತಿಭಟನೆ ನಡೆಸಿದರು.
ಹೌದು, ನಗರದ ಸುಂದರ ತಾಣವಾಗಿರುವ ಕಬ್ಬನ್ ಪಾರ್ಕ್ನಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕಬ್ಬನ್ ಪಾರ್ಕ್ ಉಳಿಸುವಂತೆ ಭಿತ್ತಿಪತ್ರಗಳನ್ನ ಹಿಡಿದು ಘೋಷಣೆ ಕೂಗಿದರು. ಲಾಲ್ ಬಾಗ್ ನಂತೆ ಕಬ್ಬನ್ ಪಾರ್ಕ್ ಅನ್ನು ಸಂರಕ್ಷಿಸಬೇಕು. ಉದ್ಯಾನದ ಒಳಗೆ ಇರುವ ಯಾವ ಕ್ಲಬ್‌ಗಳು ನಮ್ಗೆ ಬೇಕಿಲ್ಲ. ಯಾಕೆಂದರೆ ಈ ಕ್ಲಬ್ಗಳಿಂದಲೇ ಹೆಚ್ಚು ತ್ಯಾಜ್ಯಗಳು ಬರ್ತಿದ್ದು, ಉದ್ಯಾನದ ಅಂದ ಹಾಳಾಗುತ್ತಿದೆ ಅಂತ ಆರೋಪಿಸಿದ್ದಾರೆ.
ಕಬ್ಬನ್ ಪಾರ್ಕ್ನಲ್ಲಿ ಪ್ರತಿಭಟನೆ : ನಮ್ಮ ಬೆಂಗಳೂರಿನ ಪ್ರಕೃತಿ ಮತ್ತು ಸಂಪನ್ಮೂಲದ ಬಗ್ಗೆ ಜಾಗೃತಿ ಮೂಡಿಸುವ ಸಮಯ ಇದು. ಕಬ್ಬನ್ ಪಾರ್ಕ್ ಆವರಣದಲ್ಲಿ ಸೆಂಚುರಿ ಕ್ಲಬ್, ಟೆನಿಸ್ ಕ್ಲಬ್ ಮತ್ತು ಸರ್ಕಾರಿ ಸೆಕ್ರೆಟರಿಯೇಟ್ ಕ್ಲಬ್‌ನಂತಹ ಯಾವುದೇ ಕ್ಲಬ್‌ಗಳು ನಮಗೆ ಬೇಡ. ರಾಜ್ಯ ಕೇಂದ್ರ ಗ್ರಂಥಾಲಯ ಮತ್ತು ಸೆಂಚುರಿ ಕ್ಲಬ್‌ನ ಮುಂಭಾಗದಲ್ಲಿರುವ ಗೇಟ್‌ಗಳನ್ನು ಶಾಶ್ವತವಾಗಿ ಮುಚ್ಚಬೇಕು. ಏಕೆಂದರೆ ಇದು ನೈರ್ಮಲ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನಗತ್ಯ ಬಾಟಲಿಗಳು ವಿಲೇವಾರಿಯಿಂದ ಪರಿಸರವನ್ನು ಮಾಲಿನ್ಯವಾಗುತ್ತಿದೆ. ಲಾಲ್ ಬಾಗ್ನಲ್ಲಿ ಯಾವ ನಿಯಮಗಳು ಜಾರಿ ಇದ್ಯೋ ಆ ಪ್ರಕಾರ ಅದೇ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕೆಂದು ಒತ್ತಾಯಿಸಿದರು.