ಬೆಂಗಳೂರು: ಚುಡಾಯಿಸಿದನಂದು ವಿದ್ಯಾರ್ಥಿಯ ಕೊಲೆಗೈದ ಪ್ರಕರಣ ಸಂಬಂಧ ಮುಖ್ಯ ಆರೋಪಿ ಸಾದ್ ಸೇರಿ ಏಳು ಮಂದಿಯನ್ನು ಕೆಜಿ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಗಲಾಟೆಯಲ್ಲಿ ಅರ್ಬಾಜ್ ಎಂಬಾತ ಚಾಕು ಇರಿತದಿಂದ ಸಾವನ್ನಪ್ಪಿದ್ದ.
ವಿವರ: ಕೆ ಜಿ ಹಳ್ಳಿಯ ಪ್ರೋವಿನ್ಸ್ ಕಾಲೇಜಿನಲ್ಲಿ ಆಗಸ್ಟ್ 11 ರಂದು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅದೇ ಕಾಲೇಜಿನ ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿ ಸಾದ್ ಭಾಗಿಯಾಗಿದ್ದ. ಸಾದ್ ನೃತ್ಯ ಮಾಡುತ್ತಿದ್ದಾಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಚುಡಾಯಿಸುತ್ತಿದ್ದರಂತೆ. ಇದರಿಂದ ಸಿಟ್ಟಿಗೆದ್ದ ಸಾದ್ ತನ್ನ ಏಳು ಸಂಗಡಿಗರೊಂದಿಗೆ ಸೇರಿ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಜಗಳಕ್ಕಿಳಿದಿದ್ದಾರೆ.
ಮೊದಲು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದು ಬಳಿಕ ಜಗಳ ತಾರಕ್ಕೇರಿ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಈ ವೇಳೆ ಸಾದ್ ಹಾಗು ತಂಡ ಅರ್ಬಾಝ್ಗೆ ಚಾಕುವಿನಿಂದ ಇರಿದಿದ್ದಾರೆ. ಅರ್ಬಾಜ್ ಕೆಳಗೆ ಬೀಳುತ್ತಿದ್ದಂತೆ ಸಾದ್ ಹಾಗು ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೆ ಜಿ ಹಳ್ಳಿ ಪೊಲೀಸರು ಇದೀಗ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಲಾಟೆ: ಮರುದಿನವೇ ವಿದ್ಯಾರ್ಥಿ ಹತ್ಯೆ