ಬೆಂಗಳೂರು: ಏರಿಯಾದಲ್ಲಿ ಹವಾ ಇಡುವ ವಿಚಾರದಲ್ಲಿ ಇಬ್ಬರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಬಿಟಿಎಂ ಲೇಔಟ್ ನಾಲ್ಕನೇ ಹಂತದ ದೇವರಚಿಕ್ಕನಹಳ್ಳಿ ನಿವಾಸಿ ಸುಹಾಸ್(19) ಕೊಲೆಯಾದ ಯುವಕ. ಕೊಲೆ ಮಾಡಿದ ಆರು ಜನ ತಿರುಪತಿಗೆ ಹೋಗಿ ಕೇಶ ಮುಂಡನ ಮಾಡಿಸಿ ಕೊಂಡು ಬಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಪ್ರಜ್ವಲ್, ಹಿಮಾದ್ರಿ, ಜೀವನ್, ರಾಕೇಶ್, ಅವಿನಾಶ್ ಹಾಗೂ ಸಾಗರ್ ಬಂಧಿತ ಆರೋಪಿಗಳು. ಕೊಲೆಯಾದ ಸುಹಾಸ್ ಪ್ರಭಾಕರ್ ಹಾಗೂ ಕವಿತಾ ದಂಪತಿಯ ಎರಡನೇ ಪುತ್ರ. ಮೇ 9 ರಂದು ಸ್ನೇಹಿತನ ಮದುವೆ ಪಾರ್ಟಿಗೆ ಹೋಗುತಿದ್ದವನನ್ನ ಅಂದು ಸಂಜೆ 4.30 ರಿಂದ 5 ಗಂಟೆ ಸುಮಾರಿಗೆ ಪ್ರಜ್ವಲ್ ಅಲಿಯಾಸ್ ಕಾಂತ ಎಂಬಾತ ಬಂದು ಆಟೊ ಹತ್ತಿಸಿಕೊಂಡು ಹೋಗಿದ್ದ. ಆದರೆ ಅಂದು ಹೋದವನು ಎರಡು ದಿನವಾದರೂ ಮನೆಗೆ ಬಂದಿರಲಿಲ್ಲ.
ಹೀಗಾಗಿ ಪೋಷಕರು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ತನಿಖೆಗೆ ಇಳಿದ ಪೊಲೀಸರಿಗೆ ಸುಹಾಸ್ ಕೊಲೆಯಾಗಿದ್ದಾನೆ ಎಂಬ ವಿಚಾರ ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಏನಿದು ಪ್ರಕರಣ: ಏರಿಯಾದಲ್ಲಿ ಹವಾ ಮೆಂಟೇನ್ ಮಾಡುವ ವಿಚಾರವಾಗಿ ಪ್ರಜ್ವಲ್ ಮತ್ತು ಸುಹಾಸ್ ಮಧ್ಯೆ ಆಗಾಗ ಗಲಾಟೆ ನಡೆಯುತಿತ್ತು. ಸುಹಾಸ್ ಪ್ರಜ್ವಲ್ ನನ್ನ ಮುಗಿಸಿಬಿಡ್ತೀನಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಇದರಿಂದ ಹೆದರಿದ್ದ ಪ್ರಜ್ವಲ್, ಸುಹಾಸ್ ನನ್ನ ಗಾರೆಬಾವಿಪಾಳ್ಯದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಇರುವ ಸಿಗ್ನಲ್ನಿಂದ ಆಟೊದಲ್ಲಿ ಕರೆದುಕೊಂಡು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಟಸಂದ್ರ ಬ್ರಿಡ್ಜ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಪ್ರಜ್ವಲ್ ಸ್ನೇಹಿತರಾದ ಹಿಮಾದ್ರಿ, ಜೀವನ್, ಸಚಿನ್, ರಾಕೇಶ್, ಅವಿನಾಶ್, ಸಾಗರ್ ಸೇರಿಕೊಂಡು ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲುಹಾಕಿ ಕೊಂದಿದ್ದಾರೆ.
ಈ ಕೊಲೆ ಮಾಡಿದ ನಂತರ ಆರು ಜನ ತಿರುಪತಿಗೆ ಹೋಗಿದ್ದಾರೆ. ಆದರೆ, ಸಾಗರ್ ಮಾತ್ರ ಬೆಂಗಳೂರಲ್ಲೇ ಅವಿತು ಕುಳಿತಿದ್ದ. ತಿರುಪತಿಯಿಂದ ಮರಳಿ ಬಂದ ಆರುಜನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಪೊಲೀಸರು ಸಾಗರ್ನನ್ನು ಬಂಧಿಸಿದ್ದು, ಬೊಮ್ಮನಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ನಿರ್ಧಾರ