ಬೆಂಗಳೂರು: ಬಕ್ರೀದ್ ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು (ಪ್ರಾಣಿ ಬಲಿದಾನ) ನೆರವೇರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಮುಸ್ಲಿಮರು ಭಾನುವಾರ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಿದ್ದಾರೆ ಎಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿದೆ.
ಹಬ್ಬದ ದಿನದಂದು ಮುಸ್ಲಿಮರು ಈದ್ಗಾ ಮೈದಾನ, ಮಸೀದಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಧಾರ್ಮಿಕ ಆಚರಣೆಯ ಪ್ರಯುಕ್ತ ಹಬ್ಬದ ದಿನ ಸೇರಿದಂತೆ ಮೂರು ದಿನ ಖುರ್ಬಾನಿ ನೀಡುವ ಸಂಪ್ರದಾಯ ಇದೆ. ಹಬ್ಬವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದೊಂದಿಗೆ ಆಚರಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದೆ.
ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನವನ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಖುರ್ಬಾನಿಯನ್ನು ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪೊಲೀಸ್ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಮತ್ತು ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ಬಕ್ರೀದ್ ಹಬ್ಬಕ್ಕೆ ಜಾನುವಾರು ಬಲಿ ಬೇಡ: ಸಚಿವ ಪ್ರಭು ಚವ್ಹಾಣ್ ಮನವಿ