ಬೆಂಗಳೂರು: ಬಜೆಟ್ ಅಧಿವೇಶನದ ವೇಳೆ ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವ ಹಾಗೂ ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿ ಹಿಡಿಯುವ ಸಂಬಂಧ ರೂಪುರೇಷೆ ಸಿದ್ಧಪಡಿಸಲು ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆ ಈಗಲೂ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಇದೀಗ ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಸರ್ಕಾರ ಕರೆದಿರುವ ಹಿನ್ನೆಲೆಯಲ್ಲಿ, ಸಮರ್ಥ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆ ರಾಜೀನಾಮೆ ಅಂಗೀಕಾರ ಅಥವಾ ನಿರಾಕರಣೆ ಆಗದ ಸಂದರ್ಭದಲ್ಲಿ ಸಿದ್ದರಾಮಯ್ಯ ಅನಿವಾರ್ಯವಾಗಿ ಸಭೆಯ ನೇತೃತ್ವ ವಹಿಸಲಿದ್ದಾರೆ.
15ನೇ ವಿಧಾನಸಭೆಯ ಆರನೇ ಅಧಿವೇಶನದ ಪ್ರಯುಕ್ತ ವಿಧಾನಮಂಡಲದಲ್ಲಿ ಚರ್ಚಿಸಬಹುದಾದ ವಿಷಯಗಳ ಕುರಿತಂತೆ ಪರಾಮರ್ಶಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉಪಸ್ಥಿತರಿರುತ್ತಾರೆ. ಪಕ್ಷದ ಎಲ್ಲಾ ಶಾಸಕರು ಸಭೆಗೆ ತಪ್ಪದೆ ಹಾಜರಾಗಿ ತಮ್ಮ ಸಲಹೆಗಳನ್ನು ನೀಡಬೇಕೆಂದು ಸಿದ್ದರಾಮಯ್ಯ ಪತ್ರದ ಮೂಲಕ ಸೂಚಿಸಿದ್ದಾರೆ.