ಬೆಂಗಳೂರು: ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು. ಪೆನ್ನು ಹಿಡಿಯುವ ಕೈಗಳಿಗೆ ಗನ್ ಕೊಟ್ಟು ತರಬೇತಿ ನೀಡುತ್ತಿರುವುದು ಸರ್ಕಾರದ ವಿಕೃತ ಮನಸ್ಥಿಗೆ ಸಾಕ್ಷಿ. ಒಂದು ವೇಳೆ ಅಲ್ಪಸಂಖ್ಯಾತರು ಅವರಂತೆಯೇ ವರ್ತಿಸಿ, ಅವರ ಹಾಗೇಯೇ ಮನಬಂದಂತೆ ಮಾತನಾಡಿದ್ದರೆ, ಇಷ್ಟೊತ್ತಿಗಾಗಲೇ ಕೋಲಾಹಲ ಸೃಷ್ಟಿಸಿ ಬಿಡುತ್ತಿದ್ದರು. ಬಿಜೆಪಿಗೆ ಒಂದು ನ್ಯಾಯ, ಬೇರೆಯವರಿಗೊಂದು ನ್ಯಾಯವಾ ಎಂದು ಶಾಸಕ ಜಮೀರ್ ಕಿಡಿ ಕಾರಿದ್ದಾರೆ.
ಈ ಸಂಬಂಧ ಮಾಧ್ಯಮ ಸಂದೇಶ ಬಿಡುಗಡೆ ಮಾಡಿರುವ ಅವರು, ನಾವೇನು ಎಕೆ-47 ತರಬೇತಿ ಅಥವಾ ಬಾಂಬ್ ಹಾಕುವುದನ್ನು ಹೇಳಿಕೊಡುತ್ತಿಲ್ಲ. ಏರ್ಗನ್ ತರಬೇತಿ ನೀಡುತ್ತಿದ್ದೇವೆ ಅಷ್ಟೇ ಎಂದು ಸಿ.ಟಿ. ರವಿ ಸಮರ್ಥಿಸಿಕೊಂಡಿರುವುದು ಎಷ್ಟು ಸರಿ. ಸಚಿವರಾಗಿ ಜವಾಬ್ದಾರಿ ವಹಿಸಿ ಕೊಂಡಿದ್ದವರು ಈ ರೀತಿ ಉಡಾಫೆ ಉತ್ತರ ನೀಡುವುದು ಸರಿಯಲ್ಲ ಎಂದರು.
ಕೊಡಗು ಜಿಲ್ಲೆಯ ಪೊನ್ನಾರಪೇಟೆ ಶಹರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಏರ್ಗನ್ ತರಬೇತಿಗಾಗಿ, ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಇದಕ್ಕೆ ಯಾವುದೇ ರೀತಿಯ ಅನುಮತಿ ಪಡೆಯಬೇಕಿಲ್ಲ ಎಂಬ ನಿರ್ಲಕ್ಷ್ಯದ ಉತ್ತರ ನೀಡಿ ಜಾಣಕುರುಡತನ ಪ್ರದರ್ಶಿಸಿರುವ ಕೊಡಗು ಜಿಲ್ಲೆಯ ಎಸ್ಪಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗಾಂಧೀಜೀ ಅವರು ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟು, ದ್ವೇಷ ಹರಡಿ ಗೂಂಡಾ ರಾಜ್ಯ ಸೃಷ್ಟಿಸಲು ಹೊರಟಿದೆ. ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಅದನ್ನು ಬಿಟ್ಟು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡುವ ಅಗತ್ಯ ಹಾಗೂ ಆತುರ ಏನಿತ್ತು? ಎಂದು ಜಮೀರ್ ಪ್ರಶ್ನಿಸಿದ್ದಾರೆ.
ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದ ಮಾತ್ರಕ್ಕೆ, ನೀವು ಏನು ಬೇಕಾದರೂ ಮಾಡಬಹುದಾ, ಯಾವ ರೀತಿಯಾದರೂ ಹೇಳಿಕೆ ನೀಡಬಹುದು ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಮೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ನದಿಯಂತಾದ ರಸ್ತೆಗಳು: ಬೆಂಗಳೂರಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್