ಬೆಂಗಳೂರು: ಸರ್ಕಾರ ಜಮೀನು ನೀಡಿದ್ದು ಸರ್ಕಾರಿ ನೌಕರರಿಗೆ ಆದರೆ ಹಂಚಿದ್ದು ಬೇರೆಯವರಿಗೆ. ಇದಕ್ಕೆ ಅವಕಾಶ ನೀಡಿದ್ದು, ಯಾಕೆ ಎಂದು ಆಯನೂರು ಮಂಜುನಾಥ್ ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಎಸ್‌ಟಿ ಸೋಮಶೇಖರ್, ವೆಲ್ಫೇರ್ ಅಸೋಸಿಯೇಷನ್‌ಗೆ ನಿವೇಶನ ಹಂಚುವ ಅಧಿಕಾರ ಇಲ್ಲ, ವಿವಿದೋದ್ದೇಶ ಎಂದು ಬೈಲಾದಲ್ಲಿ ಸೇರಿಸಿಕೊಂಡಿದ್ದಾರೆ ಎಂದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಬಿಡಿಎ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್ ಸಹಕಾರ ಸಂಘದ ಅಡಿ ನೋಂದಣಿ ಆಗಿದೆ, ಬೈಲಾ ಅನುಮೋದನೆ ಆಗಿದೆ. ಸಾವಿರ ಜನ ಸದಸ್ಯರಿದ್ದಾರೆ. ಬಿಡಿಎ ನವರು ನೋಂದಣಿ ಆಗಿರುವ ಸಂಘಕ್ಕೆ 42 ಎಕರೆ ಜಾಗ ಹಸ್ತಾಂತರ ಮಾಡಿದ್ದಾರೆ. ಸಂಘದವರು ಹಣವನ್ನು ಕೂಡ ಬಿಡಿಎಗೆ ಪಾವತಿ ಮಾಡಿದ್ದಾರೆ, ಅವರಿಗೆ ನಿವೇಶನ ಹಂವಿಕೆ ಮಾಡುವ ಅಧಿಕಾರವಿಲ್ಲ ಎಂದು ಹೇಳಿದರು.
ಆದರೂ ನೌಕರರ ಗೃಹ ನಿರ್ಮಾಣ ಸಂಘದ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಿದೆ. ಇದರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ, ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ, ಸಂಘವನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಲಾಗಿದೆ. ಬಾಕಿ ಐದು ಎಕರೆಯನ್ನು ಲೇಔಟ್ ಮಾಡಿ ಉಳಿದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದರು.
ಉತ್ತರಕ್ಕೆ ಸದಸ್ಯ ಆಯನೂರು ಅಸಮಾಧಾನ ವ್ಯಕ್ತಪಡಿಸಿ ಚರ್ಚೆಗೆ ಅವಕಾಶ ಕೋರಿದರು. ಬೇರೆ ರೂಪದಲ್ಲಿ ತನ್ನಿ ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದು ಸಭಾಪತಿಗಳು ಸೂಚಿಸಿದರು.
ಬಿಡಿಎ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್‌ಗೆ ಸರ್ಕಾರ ನೀಡಿದ್ದ 42 ಎಕರೆ ಜಮೀನು ಬಿಡಿಎ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ನೌಕರರೇತರಿಗೆ ನಿವೇಶನ ಹಂಚಿಕೆ ಮಾಡಿರುವ ಪ್ರಕರಣದ ಕುರಿತು ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.