ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಗದೀಶ್ ಶೆಟ್ಟರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಮಹೇಶ್, ರಾಜೀವ್ ಹಾಗೂ ಹೆಚ್.ಕೆ. ಕುಮಾರಸ್ವಾಮಿ ಭಾಗಿಯಾಗಿದ್ದರು.
ದಲಿತ ಉದ್ಯಮಿಗಳನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿದೆ. ದಲಿತ ಉದ್ಯಮಿಗಳು ಕಚೇರಿಗಳಿಗೆ ಬಂದರೆ ಅಧಿಕಾರಿಗಳು ನಮ್ಮ ಬಳಿ ಸೌಜನ್ಯಯುತವಾಗಿ ಮಾತನಾಡೊಲ್ಲ, ಕುಳಿತುಕೊಳ್ಳಿ ಎಂದು ಸಹ ಹೇಳೋದಿಲ್ಲ. ಈ ಬಗ್ಗೆ ನಮಗೆ ತುಂಬಾ ನೋವಿದೆ ಎಂದು ಸಿಎಂ ಮತ್ತು ಮಾಜಿ ಸಿಎಂ ಎದುರು ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್ ತಮ್ಮ ನೋವನ್ನು ತೋಡಿಕೊಂಡರು.
ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಸಮಸಮಾಜ ನಿರ್ಮಾಣದ ಕನಸು ಕಾಣಲು ದುರ್ಬಲರನ್ನು ಸಬಲರನ್ನಾಗಿ ಮಾಡುವ ಅವಶ್ಯಕತೆ ಇದೆ. ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವ ಅವಶ್ಯಕತೆ ಹೆಚ್ಚಿದೆ. ರಾಜ್ಯದ 47 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಿದ್ದು, ಅದರಲ್ಲಿ 50 ಸಾವಿರ ಹುದ್ದೆಗಳು ಎಸ್ಸಿ, ಎಸ್ಟಿಗಳಿಗಾಗಿ ಮೀಸಲಿವೆ. ದಲಿತ ಉದ್ಯಮಿಗಳಿಗೆ 656 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಮಗ್ರ ಕೈಗಾರಿಕಾ ನೀತಿ ಜಾರಿಗೆ ತರಲು ಮುಂದಾಗಿದ್ದೇವೆ. ದಲಿತ ಉದ್ಯಮಿಗಳಿಗೆ ರಿಯಾಯಿತಿ, ಪ್ರೋತ್ಸಾಹ ನೀಡುತ್ತೇವೆ. ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಭೂಮಿಯನ್ನು ಶೇ.75 ರಷ್ಟು ರಿಯಾಯಿತಿ ದರದಲ್ಲಿ ನೀಡುವ ಚಿಂತನೆ ಇದೆ ಎಂದು ತಿಳಿಸಿದರು.