ಬೆಂಗಳೂರು: ಅತಿ ವೇಗ ತಿಥಿ ಬೇಗ.. ಒಂದೆ ಪಥ ಒಂದೇ ಗುರಿ... ಎಂದು ಕೂಗುತ್ತಾ ಯಮ ಹಾಗೂ ಚಿತ್ರಗುಪ್ತರ ವೇಷ ಧರಿಸಿ ಸಂಚಾರಿ ಪೊಲೀಸರು ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸದೆ ಇರುವುದರಿಂದ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ಬೆಂಗಳೂರಿನ ಸಂಚಾರಿ ಪೊಲೀಸರು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಮೂಲಕ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ತಲೆಗೆ ಹೆಲ್ಮೆಟ್ ಧರಿಸದೆ ವೇಗವಾಗಿ ಬರುವ ಬೈಕ್ ಸವಾರರನ್ನು ಯಮಧರ್ಮರಾಯ ಹಾಗೂ ಚಿತ್ರಗುಪ್ತರು ರಸ್ತೆಯಲ್ಲಿ ಅಡ್ಡಗಟ್ಟಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹೇಳುತ್ತಿರುವುದು ಒಂದೆಡೆಯಾದರೆ, ಸೈಕಲ್ ಏರಿ ಟ್ರಾಫಿಕ್ ಅವೆರ್ನೆಸ್ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿ ಮೂಡಿಸಿದರು. ಇಂತಹ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಹೊರವಲಯ ಕೆ.ಆರ್.ಪುರ ಹಾಗೂ ವೈಟ್ ಪೀಲ್ಡ್ ಭಾಗದಲ್ಲಿ. ಬೆಂಗಳೂರು ನಗರ ಸಂಚಾರ ಪೊಲೀಸ್ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2019 ರ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೆ.ಆರ್.ಪುರ ಸಂಚಾರಿ ಪೊಲೀಸ್ ಸಿಬ್ಬಂದಿ ಯಮ ಹಾಗೂ ಚಿತ್ರಗುಪ್ತರ ವೇಷ ಧರಿಸಿ ವಾಹನ ಸವಾರರಿಗೆ ಸಂಚಾರಿ ನಿಯಮವನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಇನ್ನು ವೈಟ್ ಫೀಲ್ಡ್ ಸಂಚಾರಿ ಪೊಲೀಸರು ಓ ಫಾರಂ ಸರ್ಕಲ್ನಿಂದ ವರ್ತೂರು ಕೋಡಿವರೆಗೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಕಾಡುಗೋಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಅಶ್ವಥ್ ನಾರಾಯಣ್ ಜಾಥಾಗೆ ಚಾಲನೆ ನೀಡಿದರು. 50ಕ್ಕೂ ಹೆಚ್ಚು ಸೈಕಲ್ಗಳಲ್ಲಿ ಜಾಥಾ ನಡೆಸಿದ ಸಂಚಾರಿ ಪೊಲೀಸರು ರಸ್ತೆಯುದ್ದಕ್ಕು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಕೂಗಿ ಹೇಳುತ್ತಾ, ಸಂಚಾರ ಸೂಕ್ತಿಗಳ ಕರಪತ್ರಗಳನ್ನು ವಾಹನ ಸವಾರರಿಗೆ ವಿತರಿಸಿದರು.