ಬೆಂಗಳೂರು: ಎಲ್ಲಾ ಕ್ಷೇತ್ರಗಳ ಮೇಲೂ ಕೊರೊನಾ ಗದಾಪ್ರಹಾರ ನಡೆಸದೇ ಬಿಟ್ಟಿಲ್ಲ. ಸಾರಿಗೆ ಕ್ಷೇತ್ರದಲ್ಲಂತೂ ಇದು ದೊಡ್ಡ ಹೊಡೆತ ಕೊಟ್ಟಿದೆ. ವಿಮಾನಗಳಂತೂ ರೆಕ್ಕೆ ಇದ್ದೂ ಹಾರಾಟ ನಡೆಸದೆ ನಿಂತಲ್ಲೇ ನಿಂತಿವೆ.
ಕೊರೊನಾ ವಿಮಾನಯಾನ ಕ್ಷೇತ್ರದ ಮೇಲೂ ಪ್ರತಿಕೂಲ ಹವಾಮಾನ ಬೀರಿದೆ. ಲಾಕ್‌ಡೌನ್ ಆದ ಮೇಲೆ 2 ತಿಂಗಳ ಬಳಿಕ ಮೇ 25ರಿಂದ ಮತ್ತೆ ಪ್ರಾರಂಭವಾದ ಸ್ವದೇಶಿ ವಿಮಾನಗಳ ಸಂಚಾರಕ್ಕೆ ಸೆಪ್ಟೆಂಬರ್ 1ಕ್ಕೆ ನೂರು ದಿನ ಪೂರೈಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 15,658 ವಿಮಾನ ಹಾರಾಟ ನಡೆಸಿವೆ. ಒಟ್ಟು 1.4 ದಶಲಕ್ಷ ದೇಶಿ ಪ್ರಯಾಣಿಕರು ಇದರ ಸೇವೆ ಪಡೆದಿದ್ದಾರೆ.
ಕೇಂದ್ರ ಸರ್ಕಾರದ ಉಡಾನ್-3 ಯೋಜನೆ ವ್ಯಾಪ್ತಿಗೆ ಒಳಪಟ್ಟ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲಾಕ್‍ಡೌನ್‌ಗೂ ಮುಂಚೆ 28 ವಿಮಾನ ಆಗಮನ ಹಾಗೂ ನಿರ್ಗಮನವಾಗುತ್ತಿತ್ತು. ಆದರೆ ಕೊರೊನಾ ಆತಂಕದಿಂದಾಗಿ ಈ ಸಂಖ್ಯೆ 17ಕ್ಕಿಳಿದಿದೆ. ಮೇ 25ರಿಂದ ಆಗಸ್ಟ್ 17ರವರೆಗೆ ಸಾಂಬ್ರಾ ನಿಲ್ದಾಣದಿಂದ 34,200 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಒಟ್ಟು 1,069 ವಿಮಾನಗಳ ಆಗಮನ-ನಿರ್ಗಮನವಾಗಿದೆ. ಜುಲೈನಲ್ಲಿ ಅತಿ ಹೆಚ್ಚು ವಿಮಾನ ಹಾರಾಟ ಮಾಡಿದ 2ನೇ ನಿಲ್ದಾಣ ಎಂಬ ಹೆಗ್ಗಳಿಕೆಯೂ ಇದಕ್ಕೆ ಸಲ್ಲುತ್ತದೆ.
ಲಾಕ್‌ಡೌನ್ ತೆರವಿನ ನಂತರ ಹುಬ್ಬಳ್ಳಿ ನಿಲ್ದಾಣ ಕೊರೊನಾ ಪೂರ್ವ ಸ್ಥಿತಿಯತ್ತ ಸಾಗುತ್ತಿದೆ. ಇಲ್ಲಿಂದ ಇಂಡಿಗೋ ಮತ್ತು ಸ್ಟಾರ್ ಏರ್ ವಿಮಾನ ಪ್ರಯಾಣ ಪ್ರಾರಂಭಗೊಂಡಿದ್ದು, ಈ ತಿಂಗಳಾಂತ್ಯಕ್ಕೆ ಮತ್ತಷ್ಟು ವಿಮಾನಗಳು ಹಾರಾಟ ನಡೆಸಲು ಸಿದ್ಧತೆ ನಡೆಸಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನದ ಸೇವೆ ಪೂರ್ಣ ಪ್ರಮಾಣದಲ್ಲಿಲ್ಲ. ಇದರಿಂದ ಆರ್ಥಿಕತೆ ಜತೆಗೆ ವಿಮಾನವನ್ನೇ ಅವಲಂಬಿಸುತ್ತಿದ್ದ ಪ್ರಯಾಣಿಕರಿಗೂ ಪೆಟ್ಟು ಬಿದ್ದಿದೆ. ಈಗ ಮಂಗಳೂರಿನಿಂದ ಮುಂಬೈ ಮತ್ತು ಬೆಂಗಳೂರಿಗೆ ಮಾತ್ರ ವಾಯುಯಾನ ಸೇವೆ ಇದೆ.
ಮೈಸೂರಿನಲ್ಲಿ ವಿಮಾನಯಾನಕ್ಕೆ ಕೋವಿಡ್ ಅನ್‌ಲಾಕ್ ನಂತರ ಹೆಚ್ಚಿನ ಬೇಡಿಕೆ ಬರುತ್ತಿದೆ. ಮೊದಲು 8 ನಗರಕ್ಕೆ ಸೇವೆ ಇತ್ತು. ಗೋವಾ, ಬೆಂಗಳೂರು ನಗರಗಳಿಗೆ ವಿಮಾನ ಹಾರಾಡ್ತಿವೆ. ಶೀಘ್ರವೇ ಹೈದರಾಬಾದ್-ಕೊಚ್ಚಿಗೂ ವಿಮಾನ ಸೇವೆ ಆರಂಭಿಸುವ ಚಿಂತನೆ ಇದೆ. ಈಗ ಅಲೆಯನ್ ಏರ್ ಇಂಡಿಯಾ, ಟ್ರೂ ಜೆಟ್ ವಿಮಾನಗಳು ಹಾರಾಟ ನಡೆಸುತ್ತಿವೆ. ಲಾಕ್‌ಡೌನ್ ಸಡಲಿಕೆ ಬಳಿಕ ಕೆಲವೇ ಕೆಲ ವಿಮಾನಗಳು ರನ್ ವೇನಲ್ಲಿವೆಯಷ್ಟೇ. ಆದರೆ ಅವೂ ಇನ್ನೂ ಟೇಕ್ ಆಫ್ ಆಗಬೇಕಿದೆ.