ಲಂಡನ್: ಮುಂದಿನ ವರ್ಷ ನಡೆಯುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿ ಈಗಲೇ ಸದ್ದು ಮಾಡುತ್ತಿದೆ. ಉಭಯ ತಂಡಗಳ ನಡುವೆ 'ಕ್ರಿಕೆಟ್ ಕಾಶಿ' ಲಾರ್ಡ್ಸ್‌ನಲ್ಲಿ ಪಂದ್ಯ ನಡೆಯಲಿದ್ದು, ಅದರ ಟಿಕೆಟ್ ದರ ಬಲು ದುಬಾರಿಯಾಗಿದೆ. ಟಿಕೆಟ್ನ ಆರಂಭಿಕ ದರವೇ 90 ಯುರೋ. ಅಂದರೆ, 8400 ರೂಪಾಯಿ. ಇನ್ನು ಪ್ರಮುಖ ಸ್ಟ್ಯಾಂಡ್‌ಗಳ ದರ ಮತ್ತಷ್ಟು ಹೆಚ್ಚಿದೆ. ಇದು ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.
ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಅಭಿಮಾನಿಗಳು ಜಮಾಯಿಸುವರು ಎಂದರಿತ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಪಂದ್ಯದ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದೆ. ಸಾಮಾನ್ಯ ಸ್ಟ್ಯಾಂಡ್‌ಗಳ ದರವನ್ನು 8,400 ರೂಪಾಯಿಗೆ ನಿಗದಿ ಮಾಡಿದ್ದರೆ, ಪ್ರಮುಖ ಸ್ಟ್ಯಾಂಡ್‌ಗಳ ದರ 11,200 ರಿಂದ 16,300 ರೂಪಾಯಿ (120 ರಿಂದ 175 ಯುರೋ) ಇದೆ.
ನಾಲ್ಕನೇ ದಿನಕ್ಕೆ ದರ ಪರಿಷ್ಕರಣೆ: ಟೆಸ್ಟ್ ಪಂದ್ಯದ ಮೊದಲ ಮೂರು ದಿನಗಳ ಟಿಕೆಟ್ ದರವನ್ನು ದುಬಾರಿ ಮಾಡಿರುವ ಎಂಸಿಸಿ, ನಾಲ್ಕನೇ ದಿನಕ್ಕೆ ಟಿಕೆಟ್ ದರವನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದೆ. ನಾಲ್ಕನೇ ದಿನದಾಟದಂದು, 90 ಯುರೋ (8400 ರೂಪಾಯಿ) ದಿಂದ 150 ಯುರೋ (14,000 ರೂಪಾಯಿ) ವರೆಗಿನ ಟಿಕೆಟ್‌ಗಳನ್ನು ಕಡಿಮೆ ಮಾಡಲಾಗುವುದು ಎಂದು ಎಂಸಿಸಿ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಜಿ.ಲ್ಯಾವೆಂಡರ್ ತಿಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಗೆ ಇರುವ ಬೇಡಿಕೆಯಂತೆ, ಇಂಗ್ಲೆಂಡ್ ಮತ್ತು ಭಾರತ ಸರಣಿಗಳಿಗೂ ಅತಿಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ. ಹೀಗಾಗಿ ಟಿಕೆಟ್ ದರಗಳನ್ನು ಹೆಚ್ಚಳ ಮಾಡಲಾಗಿದೆ ಎಂಬುದು ಎಂಸಿಸಿಯ ವಾದ.
ಟೆಸ್ಟ್ ಚಾಂಪಿಯನ್ಶಿಪ್ಗೂ ದರ ಬಿಸಿ: 2025 ರ ವಿಶ್ವ ಟೆಸ್ಟ್ ಚಾಂಪಿಯನ್ ಪಂದ್ಯವೂ ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಅದಕ್ಕೂ ದುಬಾರಿ ದರದ ಬಿಸಿ ತಾಕಿದೆ. 70 ಯುರೋಗಳಿಂದ (6,530 ರೂಪಾಯಿ) 130 ಯುರೋಗಳಿಗೆ (12,130 ರೂಪಾಯಿ) ನಿಗದಿಪಡಿಸಲಾಗಿದೆ. ಇದರ ಜೊತೆಗೆ ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಏಕದಿನ ಪಂದ್ಯದ ಟಿಕೆಟ್‌ಗಳನ್ನು 25 ಯುರೋದಿಂದ (2,330 ರೂಪಾಯಿ) 45 ಯುರೋ (4,200 ರೂಪಾಯಿ) ನಿಗದಿಪಡಿಸಲಾಗಿದೆ. ಈ ಪಂದ್ಯ ನಡೆಯುವುದು ಕೂಡ ಲಾರ್ಡ್ಸ್‌ನಲ್ಲಿ.
ಬಣಗುಟ್ಟಿದ್ದ ಲಂಕಾ ಎದುರಿನ ಪಂದ್ಯ: ಈ ವರ್ಷ ಶ್ರೀಲಂಕಾ ವಿರುದ್ಧ ನಡೆದ ಲಾರ್ಡ್ಸ್ ಟೆಸ್ಟ್‌ನಲ್ಲಿ ದುಬಾರಿ ಟಿಕೆಟ್ನಿಂದಾಗಿ ಪಂದ್ಯಕ್ಕೆ ಅಭಿಮಾನಿಗಳ ಕೊರತೆ ಉಂಟಾಗಿತ್ತು. ಕೆಲವು ಪ್ರಮುಖ ಸ್ಟ್ಯಾಂಡ್‌ಗಳ ಟಿಕೆಟ್ ದರವನ್ನು 115 ಯುರೋಗಳಿಂದ 140 ಯುರೋಗಳಿಗೆ (10,730 ರಿಂದ 13,065 ರೂಪಾಯಿ) ನಿಗದಿಪಡಿಸಲಾಗಿತ್ತು. ಇದರಿಂದಾಗಿ ಅನೇಕ ಸ್ಟ್ಯಾಂಡ್‌ಗಳು ಖಾಲಿಯಾಗಿದ್ದವು. ನಾಲ್ಕನೇ ದಿನದಂದು ಕೇವಲ 9 ಸಾವಿರ ಟಿಕೆಟ್‌ಗಳು ಮಾರಾಟವಾಗಿದ್ದವು. ಇದು ಕ್ರೀಡಾಂಗಣದ ಸಾಮರ್ಥ್ಯದ ಕಾಲುಭಾಗದಷ್ಟಿತ್ತು.