ಬೆಂಗಳೂರು: ಆಟೋ ಚಾಲಕ ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಸೇರಿ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಹಾಗೂ ಶಿವು, ರೋಜಿ, ಸತ್ಯಮಣಿಕಂಠ, ಪ್ರತಾಪ್ ಬಂಧಿತರು. ಇದೇ 24ರಂದು ಸುಂಕದಕಟ್ಟೆ ಬಳಿ ಮನೋಜ್ ಕೊಲೆಯಾಗಿತ್ತು.
ಮನೋಜ್ ತೃತೀಯ ಲಿಂಗಿ ರೋಜಿಯನ್ನ ಪ್ರೀತಿಸುತ್ತಿದ್ದನಂತೆ. ಆದರೆ, ಕೆಲ ಕಾಲ ಮನೋಜ್ ಊರಿಗೆ ಹೋದ ಸಂದರ್ಭದಲ್ಲಿ ಆರೋಪಿ ಶಿವುನನ್ನು ರೋಜಿ ಪ್ರೀತಿಸಿಳಂತೆ. ಇದಕ್ಕೆ ಶಿವು ಕೂಡ ಒಪ್ಪಿದ್ದಾನೆ. ಊರಿಂದ ಮರಳಿ ಬಂದ ಮನೋಜ್ಗೆ ವಿಷಯ ತಿಳಿದಿದೆ. ಹಾಗಾಗಿ ರೋಜಿ ಹಿಂದೆ ಓಡಾಡಬೇಡ ಎಂದು ಶಿವುಗೆ ಬೆದರಿಸಿದ್ದನಂತೆ.
ಇದನ್ನೇ ಮನಸಿಗೆ ಹಚ್ಚಿಕೊಂಡು ಶಿವು, ರೋಜಿ ಹಾಗೂ ಸಹಚರರು ಮನೋಜ್ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಸುಂಕದಕಟ್ಟೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಈ ಆರೋಪಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದರು.
ಪಶ್ಚಿಮ ವಿಭಾಗ ಪೊಲೀಸರು ತಂಡವೊಂದನ್ನು ರಚಿಸಿ ತನಿಖೆ ಕೈಗೊಂಡಾಗ ಆರು ಮಂದಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ತಾವೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.