ಬೆಂಗಳೂರು : ಐದು ದಿನಗಳ ಹಿಂದೆ ಕಬ್ಬನ್‌ಪಾರ್ಕ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ 2ನೇ ಹಂತದ ನಿವಾಸಿ ಆರೋಪಿ ಮೊಹಮ್ಮದ್ ಸದ್ದಾಂ ಎಂಬಾತ ಬಂಧಿತ. ಫೆಬ್ರವರಿ 7ರಂದು ಏರ್ಲೈನ್ ಹೋಟೆಲ್ ಬಳಿ ನಿಂತಿದ್ದ ಆಟೋ ಹಾಗೂ ಸೂಟ್ಕರ್ ಹಿಂಬದಿಯಿಂದ ಐಷರಾಮಿ ಆಡಿ-8 ಕಾರಿನಲ್ಲಿ ಬಂದ ಮೊಹಮ್ಮದ್ ಅಪಘಾತ ಎಸಗಿ ಕಾರು ನಿಲ್ಲಿಸದೆ ಪರಾರಿಯಾಗಿದ್ದ.
ಇದನ್ನೂ ಓದಿ...ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್ : ದರೋಡೆಕೋರನ ಕಾಲಿಗೆ ಗುಂಡೇಟು
ಆಟೋ ಹಾಗೂ ಸೂಟ್ಕರ್ಗೆ ಹಾನಿಯಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಅಜಾಗರೂಕ ಚಾಲನೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಪಘಾತ ಸ್ಥಳ ಮತ್ತು ಸುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದರು. ಬಳಿಕ ಕಾರಿನ ನೋಂದಣಿ ಫಲಕ ಆಧರಿಸಿ ಆರೋಪಿಯನ್ನು ಬಂಧಿಸಿದರು.
ಕಾರಿನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾಗೆ ಸೇರಿದ್ದು ಎಂಬ ಮಾಹಿತಿ ಗೊತ್ತಾಗಿದೆ. 4 ತಿಂಗಳ ಹಿಂದೆ ಬೆಂಗಳೂರು ಮೂಲದ ಕಾರು ಡೀಲರ್ಗೆ ಮುಂಬೈ ಕಾರು ಡೀಲರ್ ಮೂಲಕ ರಾಜ್ ಕುಂದ್ರಾ ತಮ್ಮ ಕಾರನ್ನು ಮಾರಿದ್ದರು. ಮಾರಾಟವಾಗಿ 4 ತಿಂಗಳಾದರೂ ಕಾರಿನ ದಾಖಲೆಗಳು ರಾಜ್ ಕುಂದ್ರಾ ಹೆಸರಿನಲ್ಲೇ ಇರುವುದು ಪತ್ತೆಯಾಗಿದೆ.