ಬೆಂಗಳೂರು: ಎಟಿಎಂ ಕೇಂದ್ರಗಳಿಂದ ಹ್ಯಾಂಗ್ ಮಾಡಿ ಹಣ ಡ್ರಾ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಗೋಕುಲಾ ಡೇರಾ ಬಂಧಿತ ವ್ಯಕ್ತಿ. ಈತನಿಂದ 48 ಎಟಿಎಂ ಕಾರ್ಡ್, 58 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಎಟಿಎಂ ಮಷಿನ್‌ನಲ್ಲಿ ಹಣ ಬರುವ ಜಾಗದಲ್ಲಿ ಕೈ ಬೆರಳಿಟ್ಟು ಸರ್ವರ್ ಹ್ಯಾಂಗ್ ಆಗುವಂತೆ ಮಾಡ್ತಿದ್ದ. ಈ ಟ್ರಿಕ್ ಬಳಸಿ ಹಣ ಡ್ರಾ ಮಾಡಿಕೊಳ್ತಿದ್ದ. ನಂತರ ಹಣ ಬಂದಿಲ್ಲ ಎಂದು ಸಂಬಂಧಪಟ್ಟ ಬ್ಯಾಂಕ್‌ಗೆ ಆನ್ಲೈನ್ ಮೂಲಕ ದೂರು ನೀಡುತ್ತಿದ್ದ. ಈ ಮೂಲಕ ಹಣವನ್ನು ಮತ್ತೆ ಬ್ಯಾಂಕಿನಿಂದ ತನ್ನ ಅಕೌಂಟ್ಗೆ ಜಮಾ ಮಾಡಿಸುತ್ತಿದ್ದ ಎಂಬ ವಿಚಾರ ತನಿಖೆಯಿಂದ ಬಯಲಾಗಿದೆ.
ಈ ರೀತಿ, 19 ಯೂನಿಯನ್ ಬ್ಯಾಂಕ್, 20 ಎಸ್ಬಿಐ, 4 ಫೆಡರಲ್ ಬ್ಯಾಂಕ್, 2 ಹೆಚ್ಡಿಎಫ್ಸಿ, 1 ಆಕ್ಸಿಸ್ ಬ್ಯಾಂಕ್ ಹಾಗು ಎರಡು ಬ್ಯಾಂಕ್ ಆಫ್ ಬರೋಡಾ ಎಟಿಎಂ ಕಾರ್ಡ್‌ಗಳನ್ನು ಬಳಸಿ ವಂಚನೆ ಎಸಗಿದ್ದಾನೆ. ಅಂದಾಜು 4-5 ಲಕ್ಷ ಹಣ ಲಪಟಾಯಿಸಿರುವ ಪ್ರಕರಣಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ಕೃತ್ಯ ಬೆಳಕಿಗೆಳೆದಿದ್ದಾರೆ.
ಇದನ್ನೂ ಓದಿ: ವಿಶ್ವದಾಖಲೆ ಬರೆದ 'ರಾಮಾಯಣ' ಸೀರಿಯಲ್; 999 ಶತಕೋಟಿಗೇರಿದ ವೀಕ್ಷಣಾ ನಿಮಿಷ!
ಈತ ಉತ್ತರ ಪ್ರದೇಶದಲ್ಲಿರುವ ವ್ಯಕ್ತಿಗಳಿಂದ ಎಟಿಎಂ ಕಾರ್ಡ್‌ಗಳನ್ನು ತರಿಸಿಕೊಳ್ಳುತ್ತಿದ್ದನಂತೆ. ಒಂದೊಂದು ಕಾರ್ಡ್ಗೆ ಇಂತಿಷ್ಟು ಕಮಿಷನ್ ಕೊಡೋದಾಗಿ ಕಾರ್ಡ್ದಾರರಿಗೆ ಆಮಿಷವೊಡ್ಡುತ್ತಿದ್ದ. ಹೀಗೆ ಪಡೆದ ಕಾರ್ಡ್‌ಗಳನ್ನು ನಗರಕ್ಕೆ ತಂದು ವಂಚನೆ ಮಾಡಲು ಬಳಸುತ್ತಿದ್ದ. ಹಣ ಕಾಣೆಯಾದ ಬಗ್ಗೆ ಎಂಎಫ್ಸಿಎಸ್ ಎಜೆನ್ಸಿ ರಾಜಾಜಿನಗರ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿರುವ ಪೋಲಿಸರು ವಿಚಾರಣೆ ಮುಂದುವರೆಸಿದ್ದಾರೆ.