ತಿರುವನಂತಪುರ/ಬೆಂಗಳೂರು: ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಸಹ ಪ್ರಭಾರಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಭಾನುವಾರ ವಿವಿಧ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ದಿನಪೂರ್ತಿ ವಿವಿಧ ಗಣ್ಯರು ಹಾಗೂ ಧರ್ಮ ಗುರುಗಳನ್ನು ಭೇಟಿಯಾದ ಡಿಸಿಎಂ, ಮುಖ್ಯವಾಗಿ ಬಿಜೆಪಿ ಮುಖಂಡರು ಹಾಗೂ ಮೆಟ್ರೋಮ್ಯಾನ್ ಇ. ಶ್ರೀಧರನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಪ್ರಚಾರ, ಕಾರ್ಯಕ್ರಮಗಳು, ಸಭೆಗಳ ಬಗ್ಗೆ ಡಿಸಿಎಂ ಅವರು ಶ್ರೀಧರನ್ ಜತೆ ಚರ್ಚೆ ನಡೆಸಿದರು.
ಶಾಂತಿಗಿರಿ ಆಶ್ರಮಕ್ಕೆ ಭೇಟಿ
ಮಧ್ಯಾಹ್ನ 1 ಗಂಟೆ ವೇಳೆಗೆ ಪೊಥೆನ್ ಕೋಡ್ನಲ್ಲಿರುವ ಆಶ್ರಮಕ್ಕೆ ಆಗಮಿಸಿದ ಡಿಸಿಎಂ, ಸ್ವಾಮಿ ಗುರುರೀತನಮ್ ಜ್ಞಾನ ತಪಸ್ವಿ ಅವರ ಜತೆ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಆಶ್ರಮದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಅಲ್ಲಿನ ಚಟುವಟಿಕೆಗಳ ಬಗ್ಗೆ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಗುರುಮಿತ್ರನ್ ಜ್ಞಾನ ತಪಸ್ವಿ ಅವರು ಮಾಹಿತಿ ನೀಡಿದರು. ಅಲ್ಲಿನ ಪ್ರಶಾಂತ ವಾತಾವರಣ ಹಾಗೂ ಸೇವಾ ಕಾರ್ಯಗಳನ್ನು ಕಂಡು ಡಿಸಿಎಂ ಅತೀವ ಸಂತಸ ವ್ಯಕ್ತಪಡಿಸಿದರು.
ನಾರಾಯಣ ಗುರುಗಳಿಗೆ ಗೌರವ
ತಿರುವನಂತಪುರ ಜಿಲ್ಲೆಯ ವರ್ಕಾಲದಲ್ಲಿರುವ ನಾರಾಯಣ ಗುರು ಅವರ ಸಮಾಧಿ ಇರುವ ಶಿವಗಿರಿ ಮಠಕ್ಕೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಭೇಟಿ ನೀಡಿದರು. ಈ ವೇಳೆ ಗುರುಗಳ ಸಮಾಧಿಗೆ ನಮನ ಸಲ್ಲಿಸಿದರು. ನಂತರ ತಿರುವನಂತಪುರದ ಕಾರ್ಡಿನಲ್ ಕ್ಲೀಮಿಸ್ ಎಮಿನೇನ್ಸ್ ಮಲಂಕರ ಚರ್ಚಿಗೆ ಭೇಟಿ ನೀಡಿ ಫಾದರ್ ಜತೆ ಮಾತುಕತೆ ನಡೆಸಿದರು.
ಬಳಿಕ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳದ ಜನ ಪ್ರಗತಿಯನ್ನು ಕೋರುತ್ತಿದ್ದಾರೆ. ಪಕ್ಷದ ಪರ ಅಲೆ ಬೀಸುತ್ತಿದೆ. ಎಲ್ಡಿಎಫ್ ಹಾಗೂ ಯುಡಿಎಫ್ ಆಡಳಿತ ಜನತೆಗೆ ಸಾಕಾಗಿದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಪರ್ಯಾಯವಾದ ರಾಜಕೀಯ ಶಕ್ತಿಯ ಉದಯಕ್ಕೆ ಇದು ಸಕಾಲ ಎಂದು ಹೇಳಿದರು.
ರಾಜ್ಯದ ಬಿಜೆಪಿ ಮುಖಂಡರು ಡಿಸಿಎಂ ಜತೆಯಲ್ಲಿ ಇದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಂಜೆ ಭಾಗವಹಿಸಿದ್ದರು.