ಬೆಂಗಳೂರು: ಡಿ ಜೆ ಹಳ್ಳಿ ಗಲಭೆ ವಿಚಾರವನ್ನು ಮರೆ ಮಾಚುವುದಕ್ಕೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊರೊನಾ ಅಕ್ರಮದ ಬಗ್ಗೆ ಸಿನಿಮಾನೇ ಮಾಡಬಹುದು ಅನ್ನೋ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಆ ಕೋಮುಗಲಭೆ ವಿಚಾರವನ್ನ ಎದುರಿಸೋ ಶಕ್ತಿ ಇವರಲ್ಲಿ ಇಲ್ಲ. ಏನೋ ಸುಳ್ಳು ಆಪಾದನೆ ಮಾಡಲು ಹೊರಟಿದ್ದಾರೆ. ಎಲ್ಲಾ ವಿಚಾರದಲ್ಲೂ ನಾವು ಲೆಕ್ಕವನ್ನೂ ಕೊಡಲು ಸಿದ್ಧರಿದ್ದೇವೆ. ಔಷಧಿ, ಉಪಕರಣಗಳ ಖರೀದಿ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ಸದನದಲ್ಲಿ ಕೊರೊನಾ ಖರೀದಿ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡ್ತೇವೆ ಎಂದು ಸ್ಪಷ್ಟಪಡಿಸಿದರು.
ಡಿ ಜೆ ಹಳ್ಳಿ, ಕೆ ಜಿ ಹಳ್ಳಿಗೆ ಬಿಜೆಪಿ ತಂಡ ಬೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಸತ್ಯಾಸತ್ಯತೆ ತಿಳಿಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಸಿಸಿಬಿ, ಪೊಲೀಸ್ ಅಧಿಕಾರಿಗಳು ಕೂಡ ತನಿಖೆ ಮಾಡ್ತಿದ್ದಾರೆ. ರಾಜಕೀಯ ಪಕ್ಷವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷವಾಗಿ ವಾಸ್ತವ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ತಂಡ ಹೋಗ್ತಿದೆ. ಗಲಭೆಯ ಮರುದಿನವೇ ನಾನು ಭೇಟಿ ಕೊಟ್ಟಿದ್ದೆ. ತನಿಖೆ ಹಂತದಲ್ಲಿ ನಾವೇನೂ ಮಾತನಾಡಬಾರದು. ವರದಿ ಬಂದ ನಂತರ ಮಾತಾಡ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಅದು ಸಿಎಂ ಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.