ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ರಾಜ್ಯದ 42,000 ಆಶಾ ಕಾರ್ಯಕರ್ತೆಯರು ತಮ್ಮ ತಮ್ಮ ಕೆಲಸದ ಸ್ಥಳದಿಂದ ಮತ್ತು ಮನೆಯಿಂದ ಆನ್‌ಲೈನ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೇಡಿಕೆಗಳೇನು?
- ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗು ಗ್ಲೌಸ್ ಒದಗಿಸಬೇಕು.
- ಇತರೆ ವಾರಿಯರ್ಸ್ಗಳಿಗೆ ಕೋವಿಡ್ ಅಪಾಯ ಭತ್ಯೆ ಮಾಸಿಕ 5,000 ರೂ. ನೀಡಿದಂತೆ ಆಶಾ ಕಾರ್ಯಕರ್ತೆಯರಿಗೂ ನೀಡಬೇಕು.
- ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ 25,000 ರೂ. ನೀಡಬೇಕು.
- ಕೋವಿಡ್ ಮೊದಲ ಅಲೆಯಲ್ಲಿ ಮತ್ತು ಈಗ ಸೋಂಕಿನಿಂದ ಸಾವಿಗೀಡಾದ ಕುಟುಂಬಕ್ಕೆ ಈಗಾಗಲೇ ಘೋಷಣೆಯಾದ 50 ಲಕ್ಷ ರೂ. ಪರಿಹಾರಕ್ಕೆ ಒತ್ತಾಯ
- ಮಾಸಿಕ ಗೌರವಧನ 4,000 ರೂ. ನೀಡಬೇಕು ಹಾಗು ಕಳೆದ ಎರಡು ತಿಂಗಳ ಬಾಕಿ ಬಿಡುಗಡೆ ಮಾಡಬೇಕು.
ಕೊರೊನಾ ಎರಡನೆಯ ಅಲೆ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಪಣವಾಗಿಟ್ಟು ಇಲಾಖೆ ನೀಡಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ಪೀಡಿತರನ್ನು ಇನ್ನಿತರೆ ಸಿಬ್ಬಂದಿ ಪಿಪಿಇ ಕಿಟ್ನೊಂದಿಗೆ ಹಾಗು ಎಲ್ಲಾ ಸುರಕ್ಷತಾ ಕ್ರಮದೊಂದಿಗೆ ಪರೀಕ್ಷೆ ಅಥವಾ ಚಿಕಿತ್ಸೆ ಮಾಡುತ್ತಿದ್ದಾರೆ. ಆದರೆ, ಬಹುತೇಕ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಕೈಗೆ ಆಕ್ಸಿಮೀಟರ್ ಕೊಟ್ಟು ಸೋಂಕಿತರನ್ನು ಪರೀಕ್ಷಿಸಲು ಕಳುಹಿಸುತ್ತಾರೆ. ಅಗತ್ಯವಿರುವ ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಕೊಡದೆ, ಶಸ್ತಾಸ್ತ್ರಗಳಿಲ್ಲದೆ ಯುದ್ಧಕ್ಕೆ ಕಳಿಸೋ ರೀತಿಯಲ್ಲಿ ಕಳುಹಿಸುತ್ತಾರೆ.
ಪ್ರತಿ ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇಷ್ಟೆಲ್ಲಾ ಅಸುರಕ್ಷತೆ ನಡುವೆ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೆ, ಮಾತ್ರೆ ಹಂಚಿಕೆ, ಕೋವಿಡ್ ಕಿಟ್ ಹಂಚಿಕೆ, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸಿರುವುದು, ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು ಇಲಾಖೆಗೆ ಒದಗಿಸುವುದು, ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸುವುದು ಸೇರಿದಂತೆ ವಿವಿಧ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆನ್‌ಲೈನ್ ಹೋರಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: ತಾಯಿ ಮೃತಪಟ್ಟ ನಾಲ್ಕೇ ದಿನಕ್ಕೆ ಮಗನೂ ಕೊರೊನಾಗೆ ಬಲಿ: ಬೆಳಗಾವಿ ವೈದ್ಯ ಕುಟುಂಬದ ಕಣ್ಣೀರ ಕಹಾನಿ