ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ನಟೋರಿಯಸ್ ಖದೀಮ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿಕಟ್ಟಿದ್ದು, ಆರೋಪಿಗಳಿಂದ 300 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕಾಂತರಾಜ್ ಅಲಿಯಾಸ್ ಮೋರಿಕಾಂತ ಹಾಗೂ ಸಹಚರ ಸುರೇಶ್ ಬಂಧಿತರು. ಐಷರಾಮಿ ಜೀವನ ಹಾಗೂ ದುಶ್ಚಟ ಮಾಡಲು ಕಳ್ಳತನದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದರು.
1990ರಿಂದಲೂ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ ಕಾಂತರಾಜ್ ಬೀಗ ಹಾಕಿದ ಮನೆಗಳನ್ನೇ ಕಳ್ಳತನಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದ. ಮನೆ ಮುಂದೆ ಕಸ ಗುಡಿಸದೇ ಇರುವುದು, ಪೇಪರ್, ಹಾಲು ಇರುವುದನ್ನು ಕಂಡರೆ ಆ ಮನೆಯಲ್ಲೇ ಯಾರು ಇಲ್ಲವೆಂದು ಅರಿತುಕೊಂಡು ಅದೇ ದಿನ ರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಇದಕ್ಕೆ ಸಹಚರ ಸುರೇಶ್ ಕೈ ಜೋಡಿಸುತ್ತಿದ್ದ.
ವಿವಿಧ ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿದ್ದರೂ ಮತ್ತೆ ಜಾಮೀನು ಪಡೆದುಕೊಂಡು ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ. ಕಾಂತರಾಜ್ ವಿರುದ್ಧ ಚಿಕ್ಕಮಗಳೂರು, ಗೌರಿಬಿದನೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.