ಬೆಂಗಳೂರು: ಸ್ವಚ್ಛತೆ ಹಾಗೂ ಸುರಕ್ಷತೆಯ ನಿರ್ವಹಣೆಯನ್ನು ಮಹಾನಗರ ಪಾಲಿಕೆ, ನಗರಸಭೆ ಮತ್ತು ಪುರಸಭೆ ಸಿಬ್ಬಂದಿ ಮರೆತು ಬಿಟ್ಟಿದ್ದಾರೆ. ಚರಂಡಿಗಳು ಬಾಯಿ ತೆರೆದು ನಿಂತು ಗಬ್ಬೆದ್ದು ನಾರುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ, ಚರಂಡಿ ನೀರು ಮನೆಗಳ ಮುಂದೆ ಮತ್ತು ಎಲ್ಲೆಂದರಲ್ಲಿ ಹರಿಯುತ್ತಿರುವ ಕಾರಣ ನಮಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಗಾನ ಆರಂಭವಾಗುತ್ತದೆ ಎಂದು ಚರಂಡಿಗಳನ್ನು ದುರಸ್ತಿಪಡಿಸದೇ ಕೈಕಟ್ಟಿ ಕುಳಿತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕಲಬುರಗಿ ನಗರದ ಜನತೆ ಮಳೆಗಾಲ ಆರಂಭವಾದಾಗಿನಿಂದ ಈವರೆಗೂ ಚರಂಡಿಗಳ ಅವ್ಯವಸ್ಥೆಯಿಂದ ಪಾಲಿಕೆಗೆ ಶಾಪ ಹಾಕುತ್ತಾ ದಿನ ದೂಡುತ್ತಿದ್ದಾರೆ. ನಗರದಲ್ಲಿ ಸುಮಾರು 7ಲಕ್ಷ ಜನರಿದ್ದು, ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ನಗರದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ಉದ್ದದ ಚರಂಡಿ ನೀರು ಹರಿದು ಭೀಮಾ ನದಿ ಪಾತ್ರದಲ್ಲಿರುವ ಶುದ್ಧೀಕರಣ ಘಟಕಕ್ಕೆ ಸೇರಬೇಕು. ಆದರೆ, ಸಮರ್ಪಕವಾಗಿ ನೀರು ಹರಿದು ಹೋಗದ ಪರಿಣಾಮ ಚರಂಡಿ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ತಲೆದೋರಿದಾಗ ತಾತ್ಕಾಲಿಕ ಶಮನಕ್ಕೆ ಮುಂದಾಗುವ ಅಧಿಕಾರಿಗಳು, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಬೆಂಗಳೂರು ಕಥೆ ಹೇಳುವುದೇ ಬೇಡ ಬಿಡಿ. ಧಾರಾಕಾರ ಮಳೆ ಸುರಿದರೆ ರಾಜಕಾಲುವೆಗಳು ತುಂಬಿ ಹರಿಯುತ್ತವೆ. ಸಾವಿರಾರು ಮನೆಗಳು ಜಲಾವೃತವಾಗುತ್ತವೆ. ಇಲ್ಲೂ ಅಷ್ಟೆ, ಅಧಿಕಾರಿಗಳು ಭೇಟಿ ಕೊಡೋದು, ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿ ಹೋಗುವುದೇ ಕೆಲಸ ಮಾಡಿಕೊಂಡಿದ್ದಾರೆ. ಹಾಗೆಯೇ ಬಳ್ಳಾರಿ ವಿಷಯಕ್ಕೆ ಬಂದರೆ ಒಳಚರಂಡಿ ಮಿಶ್ರಿತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಯಾರೊಬ್ಬರೂ ಕೂಡ ಇತ್ತ ಸುಳಿಯುತ್ತಿಲ್ಲ. ಈ ರೀತಿಯ ಒಳಚರಂಡಿ ನೀರು ಮಿಶ್ರಿತ ಹಾಗೂ ಕೆಂಪುಮಣ್ಣಿನ ನೀರು ಪೂರೈಸಿದರೆ ಹೇಗೆ ಕುಡಿಯುವುದು ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.
ಬೀದರ್ನ ಬಸವಕಲ್ಯಾಣದಲ್ಲಿ ಪುರಾತನ ಸೋಮೇಶ್ವರ ಮಂದಿರದ ಗರ್ಭ ಗುಡಿಯಲ್ಲಿ ಉದ್ಭವ ಲಿಂಗದ ಸುತ್ತಲು ಚರಂಡಿ ನೀರು ನಿಂತು ಗಬ್ಬು ವಾಸನೆ ಬೀರುತ್ತಿದೆ. ದುರ್ವಾಸನೆ ಹೆಚ್ಚಾಗುತ್ತಿರುವ ಕಾರಣ ಭಕ್ತರು ಪೂಜೆ ಸಲ್ಲಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುಮಠಕಲ್ನ ಮಿನಾಸಪೂರ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಸೇಡಂನಲ್ಲಿ ಮನೆಯೊಂದಕ್ಕೆ ನೀರು ನುಗ್ಗಿ ಪಾತ್ರೆಗಳೆಲ್ಲಾ ತೇಲಿ ಹೋಗಿದ್ದವು.
ಇನ್ನು ವಿಜಯಪುರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಒಂದು ಕಡೆಯಾದರೆ, ಇತ್ತ ರಸ್ತೆ ಮೇಲೆ ಬರುತ್ತಿರುವ ಚರಂಡಿ ನೀರಿನಿಂದ ಸಾರ್ವಜನಿಕ ರೋಸಿ ಹೋಗುವಂತಾಗಿದೆ. ಹಲವು ವರ್ಷಗಳಿಂದ ಮಹಾನಗರ ಪಾಲಿಕೆ ಕೆಲವು ಬಡಾವಣೆಗಳ ಒಳಚಂರಡಿಗಳ ದುರಸ್ತಿ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ಚರಂಡಿಗಳ ನೀರು ಆವರಿಸುವ ಕಾರಣ ಸಾರ್ವಜನಿಕರು ರಸ್ತೆಗಿಳಿಯಲು ಭಯ ಪಡುವಂತಾಗಿದೆ.
ಪ್ರತಿವರ್ಷ ಕೋಟಿ ಕೋಟಿ ಅನುದಾನ ಹರಿದು ಬಂದರೂ ನಿರೀಕ್ಷಿತ ಮಟ್ಟದಲ್ಲಿ ಚರಂಡಿ ವ್ಯವಸ್ಥೆ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಈ ಹಿಂದೆ ನಡೆದಿರುವ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಇಂದಿಗೂ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು. ಇನ್ನಾದರೂ ಸಮರ್ಪಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು ಅನ್ನೋದು ನಾಗರಿಕರ ಒತ್ತಾಸೆಯಾಗಿದೆ.