ಬೆಂಗಳೂರು: ವಿಧಾನ ಪರಿಷತ್ನಲ್ಲಿ ಅಂಗೀಕಾರಗೊಂಡ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಅಂಗೀಕಾರ ದೊರೆತಿದ್ದು, ಅಧಿಸೂಚನೆ ಹೊರಡಿಸಿದೆ.
ವಿಧಾನಸಭೆಯಲ್ಲಿ ಅಂಗೀಕೃತವಾದ ಗೋ ಹತ್ಯೆ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಮಂಡನೆಯಾಗದೆ ಉಳಿದುಕೊಂಡಿತ್ತು. ಮೊನ್ನೆ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ವಿವಾದಿತ ವಿಧೇಯಕ್ಕೆ ವಿರೋಧ ಪಕ್ಷಗಳ ವಿರೋಧದ ಮಧ್ಯೆ ಅಂಗೀಕಾರ ಪಡೆಯಲಾಯಿತು. ಅಧಿವೇಶನದಲ್ಲಿ ಅಂಗೀಕಾರಗೊಂಡ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಇದೀಗ ರಾಜ್ಯಪಾಲರು ಅಂಕಿತ ಹಾಕಿದ್ದು, ಸರ್ಕಾರ ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಿದೆ.
ಈ ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಜೈಲು ಶಿಕ್ಷೆ, ದಂಡದ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಿ ಕಠಿಣ ಅಂಶಗಳನ್ನು ಸೇರಿಸಲಾಗಿದೆ. ನೂತನ ತಿದ್ದುಪಡಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸಬ್ ಇನ್ಸ್ ಪೆಕ್ಟರ್ ಮೇಲಿನ ಅಧಿಕಾರಿ ಗೋಹತ್ಯೆ ನಡೆಯುವ ಅಥವಾ ಅಂತಹ ಉದ್ದೇಶಕ್ಕೆ ಜಾನುವಾರುಗಳ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದರೆ, ಅಂತಹ ಪ್ರದೇಶವನ್ನು ಸೀಜ್ ಮಾಡಿ, ಜಾನುವಾರುಗಳನ್ನು ವಶಪಡಿಸಿಕೊಳ್ಳಲು ಅಧಿಕಾರ ನೀಡಲಾಗಿದೆ. (ಇದನ್ನೂ ಓದಿ: ಗೋ ಹತ್ಯೆ ವಿಷಯ ಸಂಘ ಪರಿವಾರದ ಅಜೆಂಡಾ : ಸಿದ್ದರಾಮಯ್ಯ)
ಹಸು, ಕರು, ದನ, ಎಮ್ಮೆಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. 13 ವರ್ಷದ ಒಳಗಿನ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಮೊದಲ ಸಲ ಗೋಹತ್ಯೆ ಮಾಡಿದರೆ 3 ರಿಂದ 7 ವರ್ಷಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. (ಇದನ್ನೂ ಓದಿ: ಇಂದಿನಿಂದ ಅಧಿಕೃತವಾಗಿ ಗೋಹತ್ಯೆ ನಿಷೇಧ ಜಾರಿ; ಗೋ ಪೂಜೆ ಮಾಡಿ ಯಡಿಯೂರಪ್ಪ ಘೋಷಣೆ)
ಗೋಹತ್ಯೆ ಪುನರಾವರ್ತನೆಯಾದರೆ 1 ಲಕ್ಷದಿಂದ 10 ಲಕ್ಷ ರೂ. ದಂಡದ ಜೊತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಗೋಹತ್ಯೆ ಮಾಡುವವರಿಗೆ ನಿರ್ಧಿಷ್ಟ ಅವಧಿವರೆಗೆ ಜಾಮೀನು ನೀಡುವಂತಿಲ್ಲ. ಹೊಸ ಬಿಲ್ನಲ್ಲಿ ಜಾನುವಾರುಗಳ ವಧೆ ಮಾಡುವುದು ಅಥವಾ ವಧೆ ಮಾಡಲು ಸಹಕರಿಸುವುದು ಅಪರಾಧವಾಗಿದೆ. ಹತ್ಯೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕಾರ ನೀಡುವುದು ಅಪರಾಧವಾಗಿದೆ.
ವಿಧೇಯಕದಲ್ಲಿನ ಇತರ ಕಠಿಣ ಅಂಶಗಳು:
- ಕೃಷಿ ಹಾಗೂ ಪಶು ಸಂಗೋಪನೆ ಉದ್ದೇಶದಿಂದ ಜಾನುವಾರುಗಳ ಸಾಗಾಟಕ್ಕೆ ಮಾತ್ರ ಅನುಮತಿ
- ಜಾನುವಾರುಗಳ ಹತ್ಯೆ ಉದ್ದೇಶದಿಂದ ರಾಜ್ಯ ಮತ್ತು ಅಂತರ್ ರಾಜ್ಯದಲ್ಲಿ ಸಾಗಾಟ ಮಾಡುವಂತಿಲ್ಲ
- ಕೃಷಿ ಮತ್ತು ಪಶು ಸಂಗೋಪನೆ ಉದ್ದೇಶದಿಂದ ಅಂತರ್ ರಾಜ್ಯ ಸಾಗಾಟ ಮಾಡಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು
- ಕೃಷಿ ಚಟುವಟಿಕೆಗೆ ಗೋವು ಸಾಗಾಣಿಕೆಗೆ ಅನುಮತಿ ಮತ್ತು ನಿರ್ಧಿಷ್ಟ ಶುಲ್ಕ ನಿಗದಿ ಮಾಡಲಾಗುವುದು
- ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವುದು, ಖರೀದಿ ಮಾಡುವುದು ಅಥವಾ ಖರೀದಿ ಮಾಡುವಂತೆ ಪ್ರೇರೇಪಿಸುವುದು ನಿರ್ಬಂಧ
- ಖಾಯಿಲೆ ಇದೆ ಎಂದು ಪಶು ವೈದ್ಯಾಧಿಕಾರಿ ದೃಢೀಕರಿಸಿದರೆ ಮಾತ್ರ ಅದನ್ನು ಹತ್ಯೆ ಮಾಡಲು ಅವಕಾಶ ಕಲ್ಪಿಸಲಾಗಿದೆ
- ಯಾರಿಗಾದರೂ ಹಸು ಸಾಕಲು ಸಾಧ್ಯವಿಲ್ಲವಾದರೆ, ಅಂತಹ ಜಾನುವಾರುಗಳನ್ನು ಪೋಷಿಸಲು ಗೋಶಾಲೆ ತೆರೆಯಲು ನಿರ್ಧಾರ
- ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪನೆ
- ಗೋ ಹತ್ಯೆ ತಡೆಯಲು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಅಧಿಕಾರ ನೀಡಲಾಗಿದೆ